ಬೆಳಗಾವಿ: ಒಂದೆಡೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದರೆ ಇನ್ನೊಂದೆಡೆ ಸರ್ಕಾರಕ್ಕೆ ಸವಾಲುಗಳು ಎದುರಾಗುತ್ತಿವೆ. ಅಧಿವೇಶನ ಬೆನ್ನಲ್ಲೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಪ್ರತಿಭಟನೆ ಕೈಗೊಂಡಿದ್ದಾರೆ.
ಇತ್ತ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿ ಅತಿಥಿ ಶಿಕ್ಷಕರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿದರು. ಈ ವೇಳೆ, ಮಹಿಳಾ ಶಿಕ್ಷಕಿಯೊಬ್ಬರು ಸಚಿವರ ಕಾಲಿಗೆ ಬಿದ್ದು, ಬೇಡಿಕೆ ಈಡೇರಿಸುವಂತೆ ಗೋಗರೆದರು.
ಇದಾದ ಬಳಿಕ ಸಚಿವರ ವಿರುದ್ಧ ಶಿಕ್ಷಕರು ಆಕ್ರೋಶಗೊಂಡು ದಿಕ್ಕಾರ ಕೂಗಿದರು. ಇದರಿಂದ ಸ್ಥಳದಲ್ಲಿ ನೂಕುನುಗ್ಗಲು ಏರ್ಪಟ್ಟಿತು. ಹೀಗಾಗಿ ಪ್ರತಿಕ್ರಿಯೆ ನೀಡದೇ ಸಚಿವ ನಾಗೇಶ್ ಸ್ಥಳದಿಂದ ತೆರಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೂ ತರಾಟೆ
ಇದಾದ ಬಳಿಕ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಶಾಸಕರ ನಿಯೋಗ ಪ್ರತಿಭಟನಾ ನಿರತರ ಸಮಸ್ಯೆ ಆಲಿಸಲು ಮುಂದಾದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೈಕ್ ಹಿಡಿದು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿಭಟನಾ ನಿರತರು ರೊಚ್ಚಿಗೆದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ತರಾಟೆಗೆ ತೆಗೆದುಕೊಂಡು ಭಾಷಣ ಮಾಡದಂತೆ ಅಡ್ಡಿಪಡಿಸಿದರು.
ಬಿಜೆಪಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ನಮ್ಮ ಪರದಾಟ ಅವರಿಗೆ ಕಾಣಿಸುತ್ತಿಲ್ಲ. ಕಳೆದ 20 ವರ್ಷಗಳಿಂದ ನಮ್ಮ ಹೋರಾಟಕ್ಕೆ ಪ್ರತಿಫಲ ಸಿಗುತ್ತಿಲ್ಲ. ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲ್ಲೂ ನಮ್ಮ ಸಮಸ್ಯೆ ನಿವಾರಿಸಲು ಆಗಲಿಲ್ಲ. ಈಗ ಇಲ್ಲಿ ಬಂದರೇ ಹೇಗೆ? ಎಂದು ಕಿಡಿಕಾರಿದರು. ಈ ವೇಳೆ ಗಲಾಟೆ ಮುಂದುವರೆಸಿದ್ದ ಓರ್ವ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ಬೇರೆಡೆಗೆ ಕರೆದೊಯ್ದರು.
ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್