ಬೆಳಗಾವಿ: ವರದಕ್ಷಿಣೆ ಆರೋಪದ ಹಿನ್ನೆಲೆಯಲ್ಲಿ ಮದುವೆ ದಿನವೇ ಸರ್ಕಾರಿ ನೌಕರರೊಬ್ಬರನ್ನು ಬಂಧಿಸಿದ ಘಟನೆ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಹಳೆ ಹುಬ್ಬಳ್ಳಿ ನಿವಾಸಿ ಸಚಿನ ವಿಠ್ಠಲ ಪಾಟೀಲ ಬಂಧಿತ ವ್ಯಕ್ತಿ. ಖಾನಾಪುರದ ತಾಲೂಕಿನ ಗುಂಜಿ ಹೋಬಳಿಯ ಗ್ರಾಮವೊಂದರ ಯುವತಿಯೊಂದಿಗೆ ಡಿ.31ರಂದು ಸಚಿನ ಪಾಟೀಲ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಖಾನಾಪುರದ ಲೋಕಮಾನ್ಯ ಸಭಾಗೃಹದಲ್ಲಿ ಅಂದು ಮದುವೆ ವಿಧಿ ವಿಧಾನಗಳು ಆರಂಭವಾಗಿದ್ದವು. ಈ ಮಧ್ಯೆ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರಿಂದ ಮದುವೆ ಮುರಿದುಬಿದ್ದಿತ್ತು. ಬಳಿಕ ಅದೇ ದಿನ ಯುವತಿಯ ಕಡೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಲ್ಯಾಣ ಮಂಟಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ವರನನ್ನು ವಶಕ್ಕೆ ಪಡೆದಿದ್ದರು.
''ಕಳೆದ ಮೇ ತಿಂಗಳಲ್ಲಿ ನೆರವೇರಿದ ನಿಶ್ಚಿತಾರ್ಥದಲ್ಲಿ 5 ಲಕ್ಷ ರೂ ಮತ್ತು 50 ಗ್ರಾಂ ಬಂಗಾರ ವರದಕ್ಷಿಣೆ ಕೊಡುವುದಾಗಿ ಮಾತುಕತೆ ಆಗಿತ್ತು. ಡಿ 31ರಂದು ಮದುವೆ ವಿಧಿ ವಿಧಾನಗಳು ನಡೆಯುತ್ತಿರುವಾಗ ವರ ಸಚಿನ್ ತಗಾದೆ ತೆಗೆದಿದ್ದು, 10 ಲಕ್ಷ ರೂ ಮತ್ತು 100 ಗ್ರಾಂ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ, ಇದನ್ನು ನಾವು (ವಧುವಿನ ಕುಟುಂಬಸ್ಥರು) ನಿರಾಕರಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವರದಕ್ಷಿಣೆ ಕೊಡದ ಹೊರತು ನಾನು ಮದುವೆ ಆಗುವುದಿಲ್ಲ ಎಂದು ಹಠ ಹಿಡಿದ. ಇದರಿಂದ ರೋಸಿ ಹೋದ ನಾವು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು'' ಎಂದು ವಧುವಿನ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ವಧುವಿನ ಕುಟುಂಬಸ್ಥರ ಮಾಹಿತಿ ಮೇರೆಗೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಖಾನಾಪುರದ ಪಿಎಸ್ಐ ಎಂ ಬಿ ಬಿರಾದರ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದರು. ಖಾನಾಪುರ ಠಾಣೆಯಲ್ಲಿ ಆರೋಪಿ ವರನ ವಿರುದ್ಧ ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಐಪಿಸಿ ಸೆಕ್ಷನ್ 420 (ವಂಚನೆ) ಹೀಗೆ ಮೂರು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಧೀಶರ ಆದೇಶದ ಮೇರೆಗೆ ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಬಂಧಿತ ವರ ಸಚಿನ್ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎಸ್ಡಿಸಿ ನೌಕರ.
ಇದನ್ನೂ ಓದಿ: ವರದಕ್ಷಿಣೆ ಬೇಡ...! ಸಾಮಾಜಿಕ ಪಿಡುಗಿನ ವಿರುದ್ಧ ವಿನೂತನ ಹೋರಾಟ ನಡೆಸುತ್ತಿರುವ ಯುವಕ