ಬೆಳಗಾವಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ 54ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕಿತ್ತೂರು ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಜನ ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಇಡೀ ಉತ್ತರ ಕರ್ನಾಟಕದಲ್ಲಿ ಯುವ ನಾಯಕನ ಜನ್ಮ ದಿನಕ್ಕೆ ಇಷ್ಟೊಂದು ಜನ ಬಂದಿದ್ದು ಇದೇ ಮೊದಲು ಅನಿಸುತ್ತದೆ. ಯಾವ ರೀತಿ ರೈತನಿಗೆ ಭಾಷೆ, ಜಾತಿ, ಧರ್ಮದ ಬೇಧವಿಲ್ಲವೋ ಆ ರೀತಿ ಯಾವುದೇ ಬೇಧವಿಲ್ಲದ ನಾಯಕ ವಿನಯ್ ಕುಲಕರ್ಣಿ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಒಬ್ಬ ಪ್ರಾಮಾಣಿಕ ರಾಜಕಾರಣಿ ವಿನಯ್ ಕುಲಕರ್ಣಿ. ನಾನು ಸಿಎಂ ಆಗಿದ್ದಾಗ ಅವರನ್ನು ಗುರುತಿಸಿ ಮಂತ್ರಿ ಮಾಡಿದ್ದೆ. ಅವರು ಯಾವತ್ತೂ ಮಂತ್ರಿ ಸ್ಥಾನ ಕೊಡಿ ಅಂತಾ ಕೇಳಿರಲಿಲ್ಲ. ಪಂಚಮಸಾಲಿ ಜನಾಂಗದಲ್ಲಿ ಭವಿಷ್ಯದ ನಾಯಕ ಅಂತಾ ಮಂತ್ರಿ ಮಾಡಿಕೊಂಡಿದ್ದೆ. ಯಾವತ್ತೂ ಭ್ರಷ್ಟರಾಗಲಿಲ್ಲ ಎಂದರು.
ಬಳಿಕ ಮಾತನಾಡಿದ ವಿನಯ್ ಕುಲಕರ್ಣಿ, ನಾನು ಪಕ್ಷೇತರ ಶಾಸಕನಾಗಿದ್ದಾಗ ದುಡ್ಡು ಇರಲಿಲ್ಲ. ನೀವು ಕಿಸೆಯಲ್ಲಿ ದುಡ್ಡು ಹಾಕಿದ್ದೀರಿ. ಸೋಲು ಗೆಲುವು ರಾಜಕಾರಣದಲ್ಲಿ ಇರುತ್ತದೆ. ಅದೇ ರೀತಿ ಷಡ್ಯಂತ್ರಗಳು ರಾಜಕಾರಣದಲ್ಲಿ ಇರುತ್ತವೆ. ನಾನು ಮತ್ತೆ ಬಂದೇ ಬರ್ತೀನಿ. ನಿಮ್ಮ ಸಲುವಾಗಿ ಕೆಲಸ ಮಾಡ್ತೀನಿ ಎಂದು ಹೇಳಿದರು.
ಇದನ್ನೂ ಓದಿ: ಕಿತ್ತೂರಿನಲ್ಲಿ ವಿನಯೋತ್ಸವ: ಶಾಸಕ ಅಮೃತ್ ದೇಸಾಯಿಗೆ ಟಕ್ಕರ್ ಕೊಡಲು ವಿನಯ್ ಕುಲಕರ್ಣಿ ಶಕ್ತಿ ಪ್ರದರ್ಶನ