ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಅರ್ಜಿ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾಗಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದು ವಾಮಮಾರ್ಗದ ಮೂಲಕ ಜನಸಾಮಾನ್ಯರ ಬಳಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ಇಂಥಹದ್ದೇ ಘಟನೆಯೊಂದು ನಡೆದದ್ದು ಆರೋಪ ಕೇಳಿ ಬಂದ ತಕ್ಷಣ ಅಧಿಕಾರಿಗಳು ದಾಳಿ ಮಾಡಿ ಆ ಸೈಬರ್ ಅಂಗಡಿ ಸೀಜ್ ಮಾಡಿದ್ದಾರೆ.
ಅದಕ್ಕೂ ಮುನ್ನ ಅರ್ಜಿ ಹಾಕಲು ಬಂದ ಫಲಾನುಭವಿಗಳಿಗೆ ಸೈಬರ್ ಅಂಗಡಿ ಸಿಬ್ಬಂದಿ ಆವಾಜ್ ಹಾಕಿದ್ದು ಆ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಅರ್ಜಿ ಹಾಕಬಹುದು ಎಂದು ಹೇಳಿದೆ. ಆದರೆ, ನೀವೇಕೆ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುತ್ತೀದ್ದೀರಿ ಎಂದು ಅರ್ಜಿ ಹಾಕಲು ಬಂದ ಫಲಾನುಭವಿಯೊಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ಗ್ರಾಮ ಒನ್ ಸೈಬರ್ ಸಿಬಂದಿಯು ಉಡಾಫೆ ಉತ್ತರ ನೀಡುತ್ತಾ ಆವಾಜ್ ಹಾಕಿದ್ದರು.
ಪ್ರತಿ ತಿಂಗಳು ನನಗೆ 18 ಸಾವಿರ ಹಣ ನೀಡಿ, ಆಗ ನಾನು ಸಹ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಿ ಕೊಡುತ್ತೇನೆ ಎಂದು ಗ್ರಾಹಕರಿಗೆ ಉಡಾಫೆ ಉತ್ತರ ನೀಡಿದ್ದರು. ಇದನ್ನು ಗ್ರಾಕಹರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ಅವರಖೋಡ ಗ್ರಾಮ ಒನ್ ಸಿಬಂದಿ ಹಾಲಪ್ಪ ಲೋಕೂರ ಎಂಬುವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸಾರ್ವಜನಿಕರಿಂದ 100- 200 ರೂಪಾಯಿ ಹಣ ಪಡೆಯುತ್ತಿದ್ದಾರೆ ಎಂದು ಜಾಲತಾಣಗಳಲ್ಲಿಯೇ ಗ್ರಾಹಕರು ಆರೋಪ ಮಾಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಹಾಲಪ್ಪ ಅವರೊಂದಿಗೆ ಮಾತಿಗೆ ಮಾತು ಬೆಳೆಸಿದ್ದಲ್ಲದೇ ಏನಾದರೂ ಮಾಡಿಕೊಳ್ಳಿ ಎಂದು ದರ್ಪ ತೋರಿದ್ದರು. ಆತನ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಅವರಖೋಡ ಗ್ರಾಮದ ಶಾಂತಿನಾಥ ಕಾಗವಾಡ ಮಾತನಾಡಿ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಉಚಿತ ಅಂತ ಘೋಷಣೆ ಮಾಡಿದೆ. ಆದರೆ, ನಮ್ಮ ಗ್ರಾಮದಲ್ಲಿ ಒಂದು ಅರ್ಜಿಗೆ 100 ರೂಪಾಯಿ ಪಡೆಯಲಾಗುತ್ತಿದೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿದರೆ ಸೈಬರ್ ಸಿಬ್ಬಂದಿ ಕ್ಯಾರೆ ಅನ್ನುತ್ತಿಲ್ಲ ಅಂತ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ಅಲ್ಲದೇ ನಮ್ಮಂತಹ ಯುವಕರು ಇಂತಹ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದರು.
ತಹಶೀಲ್ದಾರ್ ಹೇಳಿದ್ದಿಷ್ಟು: ಈ ವಿಷಯಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಅಥಣಿ ತಹಶೀಲ್ದಾರ್ ಬಿ ಎಸ್ ಕಡಕಬಾವಿ, ಅವರಖೋಡ ಗ್ರಾಮ ಒನ್ ಸಿಬಂದಿ ವಿರುದ್ಧ ದೂರು ಕೇಳಿ ಬಂದಿದೆ. ಆದಷ್ಟು ಬೇಗನೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ವಿಚಾರಣೆ ಮಾಡಲಾಗುಗವುದು. ಒಂದು ವೇಳೆ ಆರೋಪ ಸಾಬೀತಾದರೆ ನಾವು ಗ್ರಾಮ ಒನ್ ಲಾಗಿನ್ ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದ್ದರು.
ಇದಾದ ಕೆಲವೇ ಹೊತ್ತಲ್ಲೇ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಅದನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಸಂಬಂಧಿಸಿದ ವ್ಯಕ್ತಿಯ ವಿರುದ್ಧ ದೂರು ಕೂಡ ದಾಖಲು ಮಾಡಿಕೊಂಡಿದ್ದಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದರಿಂದ ದೂರು ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Gruhalakshmi Yojana: ಮಳೆ ಲೆಕ್ಕಿಸದೆ ಸೇವಾ ಕೇಂದ್ರದ ಮುಂದೆ ಜಮಾಯಿಸಿದ ಗೃಹಲಕ್ಷ್ಮಿಯರು