ಬೆಳಗಾವಿ: ಜಿಲ್ಲೆಯಲ್ಲಿ 28 ಹಾಗೂ 29 ರಂದು ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಮಾರ್ಗಸೂಚಿ ಪ್ರಕಾರ ಸುರಕ್ಷಿತವಾಗಿ ಸಾಗಣೆ ಮಾಡುವುದು ಸೇರಿದಂತೆ ಒಟ್ಟಾರೆ ಪರೀಕ್ಷೆಯನ್ನು ಸುಗಮ ಮತ್ತು ಸುಸೂತ್ರವಾಗಿ ನಡೆಸಲು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಎಂದು ಸಿಬ್ಬಂದಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ.28 ಹಾಗೂ 29 ರಂದು ವಿವಿಧ ನೇಮಕಾತಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು (ತಾಂತ್ರಿಕ) ಹಾಗೂ ತಾಂತ್ರಿಕೇತರ, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ಸೇಲ್ಸ್ ಮೇಲ್ವಿಚಾರಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿವೆ. ಅ.28 ರಂದು ನಗರದ 20 ಪರೀಕ್ಷಾ ಕೇಂದ್ರಗಳಲ್ಲಿ 8789 ಅಭ್ಯರ್ಥಿಗಳು ಹಾಗೂ ಅ.29 ರಂದು ಜಿಲ್ಲೆಯಲ್ಲಿ 30,940 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಹೇಳಿದರು.
ನೇಮಕಾತಿ ಪರೀಕ್ಷೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಅಕ್ರಮ, ಲೋಪದೋಷ ಅಥವಾ ಗೊಂದಲಗಳಿಗೆ ಆಸ್ಪದ ನೀಡಬಾರದು. ಕೊಠಡಿ ಅಧೀಕ್ಷಕರು, ಮೇಲ್ವಿಚಾರಕರು ಹಾಗೂ ಜಾಗೃತ ದಳದ ಅಧಿಕಾರಿಗಳು ತಮಗೆ ವಹಿಸಲಾದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷೆಯ ಬಳಿಕ ಉತ್ತರಪತ್ರಿಕೆಗಳನ್ನು ಮಾರ್ಗಸೂಚಿಯ ಪ್ರಕಾರ ಬಿಗಿಭದ್ರತೆಯಲ್ಲಿ ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಿಸಬೇಕು. ಕರ್ತವ್ಯಲೋಪ ಅಥವಾ ಅಕ್ರಮ ಎಸಗಿರುವುದು ಕಂಡುಬಂದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಡಿಸಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ಕರ್ತವ್ಯಲೋಪ-ಗೊಂದಲಕ್ಕೆ ಬೇಡ ಅವಕಾಶ: ಪರೀಕ್ಷಾ ಕರ್ತವ್ಯವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು. ಕರ್ತವ್ಯಲೋಪ ಅಥವಾ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ವಸ್ತ್ರಸಂಹಿತೆ, ಪರೀಕ್ಷಾರ್ಥಿಗಳ ತಪಾಸಣೆ, ಭದ್ರತೆ ನಿಯೋಜನೆ ಹಾಗೂ ಸಮಯಪಾಲನೆ ಬಗ್ಗೆ ಜಾಗರೂಕತೆ ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಜಾಗೃತದಳ ರಚಿಸಲಾಗಿರುತ್ತದೆ. ಪರೀಕ್ಷಾರ್ಥಿಗಳ ತಪಾಸಣೆ, ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಆಭರಣ ಧರಿಸಲು ನಿರ್ಬಂಧ: ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ ಎಂ ಕಾಂಬಳೆ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಕೊಂಡೊಯ್ಯುವಂತಿಲ್ಲ. ಪರೀಕ್ಷಾರ್ಥಿಗಳು ಮಾಂಗಲ್ಯ ಹೊರತುಪಡಿಸಿ ಕಿವಿಯೋಲೆ, ಮೂಗುತಿ ಮತ್ತಿತರ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ.
ಹಿಜಾಬ್ ಧರಿಸುವವರು ಕನಿಷ್ಠ ಅರ್ಧ ಗಂಟೆ ಮೊದಲು ಹಾಜರಿರಬೇಕು. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವವರನ್ನು ಪ್ರತ್ಯೇಕ ಮಹಿಳಾ ಸಿಬ್ಬಂದಿ ಮುಂಚಿತವಾಗಿಯೇ ಕೂಲಂಕಷವಾಗಿ ತಪಾಸಣೆ ನಡೆಸಿದ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸಬೇಕು. ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಪ್ರವೇಶದ್ವಾರದಲ್ಲಿ ವಿಡಿಯೋಗ್ರಾಫಿ ಮಾಡಬೇಕು. ಪರೀಕ್ಷಾ ಕೊಠಡಿಯಲ್ಲಿ ವಿಡಿಯೋಗ್ರಾಫಿಗೆ ಅವಕಾಶವಿಲ್ಲ. ಎಲ್ಲ ಸಿಸಿಟಿವಿಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತಿರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಐ ಎ ಎಸ್ ಅಧಿಕಾರಿ ಶುಭಂ ಶುಕ್ಲಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಚಿಕ್ಕೋಡಿ ಉಪ ನಿರ್ದೇಶಕ ಪಿ.ಐ. ಭಂಡಾರಿ, ಪರೀಕ್ಷಾ ಕೇಂದ್ರಗಳ ಸಹ ಮುಖ್ಯ ಅಧೀಕ್ಷಕರು, ವೀಕ್ಷಕರು, ಮಾರ್ಗಾಧಿಕಾರಿಗಳು, ಜಾಗೃತ ದಳದ ಅಧಿಕಾರಿಗಳು ಇದ್ದರು.
ಇದನ್ನೂಓದಿ:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ