ಬೆಳಗಾವಿ: ವೀರ ರಾಣಿ ಚೆನ್ನಮ್ಮನ ನಾಡಿಗೆ ಭೇಟಿ ನೀಡಿದ್ದು ಬಹಳ ಸಂತೋಷ ತಂದಿದೆ. 18ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ರಾಣಿ ಚೆನ್ನಮ್ಮ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಮೂರು ದಿನಗಳ ಪ್ರವಾಸದ ನಿಮಿತ್ತ ಥಾವರಚಂದ್ ಗೆಹ್ಲೋಟ್ ಇಂದು ಬೆಳಗಾವಿಗೆ ಆಗಮಿಸಿದರು. ಮುಂಬೈನಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೂಗುಚ್ಛ ನೀಡಿ ಸ್ವಾಗತಿಸಿದರು.
ಇದಾದ ಬಳಿಕ ಜಿಲ್ಲೆಯ ಕಿತ್ತೂರು ಪಟ್ಟಣಕ್ಕೆ ಭೇಟಿ ನೀಡಿದ ರಾಜ್ಯಪಾಲರು ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಪುರಾತನ ಕೋಟೆ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಣಿ ಚೆನ್ನಮ್ಮನ ಇತಿಹಾಸವನ್ನು ಕೇಳಿದ್ದೇನೆ. ಆಕೆಯ ನಾಡಿಗೆ ಭೇಟಿ ನೀಡುವ ಇಚ್ಛೆ ಹೊಂದಿದ್ದೆ. ಕರ್ನಾಟಕದ ರಾಜ್ಯಪಾಲನಾದ ನಂತರ ಈ ಸುವರ್ಣಾವಕಾಶ ನನಗೆ ಲಭಿಸಿದ್ದು ಸಂತಸವಾಗಿದೆ ಎಂದು ತಿಳಿಸಿದರು.
ಕಿತ್ತೂರು ಕಲ್ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಜೊತೆಗೆ ಕೆಲಹೊತ್ತು ಚರ್ಚಿಸಿದರು. ಮಠದ ವತಿಯಿಂದ ರಾಜ್ಯಪಾಲರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನಾರಂಭ