ಬೆಳಗಾವಿ: ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಸಂತ್ರರಿಗೆ ರಾಜ್ಯ ಸರ್ಕಾರ ನೆರವಾಗಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರಿಗೆ ತ್ವರಿತಗತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ನಡಿತಿದೆ. ಎನ್.ಡಿ.ಆರ್.ಎಫ್ ಹಾಗೂ ರಾಜ್ಯ ಸರ್ಕಾರದ ಗೈಡ್ ಲೈನ್ಸ್ ಮೂಲಕ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದರು.
ಬಿಬಿಎಂಪಿಯು ಸಾಕಷ್ಟು ಕೆಲಸ ಮಾಡಿದೆ. ಆದರೆ ಅಷ್ಟು ಕೆಲಸ ಸಾಲಲ್ಲ, ಇನ್ನೂ ಹೆಚ್ಚಿನ ಕೆಲಸ ಆಗಬೇಕಿದೆ. ನಗರ ಪ್ರದೇಶಗಳಲ್ಲಿ ಬಯಲು ಪ್ರದೇಶ ಇರಲ್ಲ. ಕಟ್ಟಡ ನಿರ್ಮಾಣವಾಗಿರುತ್ತವೆ. ಹೀಗಾಗಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ರಾಜಕಾಲುವೆ, ಕೆರೆ ಅಕ್ಕಪಕ್ಕದಲ್ಲಿ ಸಮಸ್ಯೆಗಳಿವೆ.
ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಇನ್ನಷ್ಟು ಕಾರ್ಯಪ್ರವೃತ್ತವಾಗಬೇಕು. ಮಳೆ ನೀರನ್ನು ಅಲ್ಲಲ್ಲಿ ತಡೆಗಟ್ಟಲು ಕ್ರಮ ವಹಿಸಬೇಕು. ಶೇಖರಣೆಗೂ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸರ್ಕಾರದಿಂದ ಆಗಿವೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದರು.