ಬೆಳಗಾವಿ: ಗೋ ಹತ್ಯೆ ನಿಷೇಧ ಕಾಯ್ದೆ ಜಾತಿ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ರೈತರಿಗೆ ಸಂಬಂಧಿಸಿದ್ದು. ಬರೀ ಗೋವುಗಳಿಗೆ ಪೂಜೆ ಸಲ್ಲಿದ್ರೆ ಏನು ಉಪಯೋಗ? ಅವುಗಳ ಹೊಟ್ಟೆಗೆ ಆಹಾರ ಹಾಕಿ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗೋವುಗಳ ಬಗ್ಗೆ ಪೂಜ್ಯ ಭಾವನೆ ಇದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಆದ್ರೆ ರೈತನೊಬ್ಬನ ಹತ್ತಿರವಿರುವ ಹಸುಗಳು ಹಾಲು ಕರಿಯುವುದನ್ನು ನಿಲ್ಲಿಸಿದ್ರೆ ಆತ ಅದನ್ನು ಮಾರಾಟ ಮಾಡಿ ಮತ್ತೊಂದು ಹಸು ತೆಗೆದುಕೊಳ್ಳುತ್ತಾನೆ. ಹೀಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮುಂಚೆ ರಾಜ್ಯ ಸರ್ಕಾರ ರೈತನಲ್ಲಿರುವ ಬರಡಾಗಿರುವ ಹಸುಗಳನ್ನು ಖರೀದಿಸಬೇಕು ಎಂದರು.
ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಗೋ ಶಾಲೆಗಳನ್ನು ತೆರೆಯಬೇಕು. ಆದ್ರೆ ಇದ್ಯಾವುದನ್ನು ಸರ್ಕಾರ ಮಾಡಿಲ್ಲ. ಆದ್ರೆ, ಬರಡಾಗಿರುವ ಗೋವುಗಳನ್ನು ಏನು ಮಾಡಬೇಕು, ಮುಂದಿನ ಜೀವನ ಏನು? ಅದರ ಮೇಲೆ ಡಿಪೆಂಡ್ ಆಗಿರುವ ರೈತನಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅದನ್ನು ಬಿಟ್ಟು ಹಸುವನ್ನು ತಂದು ರಸ್ತೆಯಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸಿದ್ರೆ ಪರಿಹಾರ ಸಿಗುತ್ತಾ ಎಂದು ಪ್ರಶ್ನಿಸಿದರು.
ಓದಿ... ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಹಿಂಸೆ: ನಾಗೇಶ್ ಹೆಗಡೆ
ಹಸಿದಿರುವ ಹಸುಗೆ ಮಂಗಳಾರತಿ ಮಾಡ್ತೀನಿ, ಅಭಿಷೇಕ ಮಾಡ್ತೀನಿ ಅಂದ್ರೆ ಅದರ ಉಪಯೋಗವೇನು? ರಸ್ತೆಯಲ್ಲಿಯೇ ಸಾಕಷ್ಟು ಹಸುಗಳು ಸಿಗುತ್ತವೆ. ಅವುಗಳನ್ನು ಸಾಕದೇ ಅನಾಥ ಮಾಡಿದ್ದೇರಿ. ಒಂದು ಜರ್ಸಿ ಹಸು ಸಾಕಲು ಪ್ರತಿದಿನ ಎರಡ್ನೂರು ರೂಪಾಯಿ ಖರ್ಚಾಗುತ್ತದೆ. ಅದನ್ನು ಕೊಡೊರ್ಯಾರು ಎಂದು ಪ್ರಶ್ನಿಸಿದ ಅವರು, ಎಲ್ಲ ರಾಜ್ಯಗಳಲ್ಲಿಯೂ ಬ್ಯಾನ್ ಮಾಡಬೇಕು ಎನ್ನುವ ಬಿಜೆಪಿ, ಗೋವಾದಲ್ಲಿ ತಮ್ಮ ಸರ್ಕಾರವೇ ಇದೆ. ಅಲ್ಲಿ ಯ್ಯಾಕೆ ಬ್ಯಾನ್ ಮಾಡಲಿಲ್ಲ. ಉತ್ತರ ಭಾರತದಲ್ಲಿ ಬೀಫ್ ತಿಂತೀವಿ ಅಂತಾ ನಿಮ್ಮ ಪಕ್ಷದವರೇ ಹೇಳುತ್ತಾರೆ. ಅಲ್ಲಿ ಯಾಕೆ ನೀವು ನಿಷೇಧ ಮಾಡುತ್ತಿಲ್ಲ. ಹೀಗಾಗಿ ದೇಶದಲ್ಲಿ ಒಂದೇ ಕಾನೂನು ಇರಬೇಕು ಎಂದು ಹೇಳಿದರು.