ಚಿಕ್ಕೋಡಿ: ಬೆಳಗಾವಿಯಲ್ಲಿ ಪೊಲೀಸ್ ಠಾಣೆಯಿಂದಲೇ ಚಿನ್ನ ಕದ್ದ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಇದರ ಕಿಂಗ್ ಪಿನ್ ತಾನೊಬ್ಬ ಪೊಲೀಸ್ ಅಧಿಕಾರಿ ಅಂತ ಟೋಲ್‌ಗಳಲ್ಲಿ ನಕಲಿ ಐಡಿ ತೋರಿಸಿ ಓಡಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ವಾರ ಯಮಕಮರಡಿ ಪೊಲೀಸ್ ಠಾಣೆಯಿಂದಲೇ ಚಿನ್ನ ಮಾಯವಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ತಮ್ಮ ತನಿಖೆ ಮುಂದುವರೆಸಿದ್ದಾರೆ. ತನಿಖೆಯ ವೇಳೆ ಕಿರಣ್ ವೀರಗೌಡರ ಹೆಸರು ಮುನ್ನೆಲೆಗೆ ಬಂದಿದೆ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ತನಿಖೆ ವೇಳೆ ಕಿರಣ್ ಹೆಸರನ್ನೇ ಪ್ರಸ್ತಾಪಿಸಿದ್ದಾರಂತೆ. ಸಿಐಡಿ ಅಧಿಕಾರಿಗಳು ಕಿರಣ್ ಮೂಲ ಪತ್ತೆ ಮಾಡುತ್ತಿದ್ದಾರೆ. ಪ್ರಾಥಮಿಕವಾಗಿ ಅಧಿಕಾರಿಗಳಿಗೆ ಆತ ನಕಲಿ ಪೊಲೀಸ್ ಐಡಿ ಬಳಸಿ ಟೋಲ್‌ಗಳಲ್ಲಿ ಓಡಾಡಿಕೊಂಡಿದ್ದು ಗೊತ್ತಾಗಿದೆ. ಅದರ ಕೆಲವೊಂದಿಷ್ಟು ಫೋಟೋ ಹಾಗೂ ಓಡಾಟದ ಮಾಹಿತಿ ಲಭಿಸಿವೆ.
ತನ್ನದೇ ಮಾಲೀಕತ್ವದ ಕೆಎ 25 ಎಂಎ 0966 ಕಾರಿನಲ್ಲಿ ಕಿರಣ್ 7 ಬಾರಿ ಸಂಚರಿಸಿರುವ ಮಾಹಿತಿ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೂವರು ಅಧಿಕಾರಿಗಳಿಗೆ ಇಲಾಖೆ ವರ್ಗಾವಣೆ ಶಿಕ್ಷೆ ನೀಡಿದೆ.
ಆದರೆ ಪ್ರಕರಣದ ಪ್ರಮುಖ ಆರೋಪಿ ಕಿರಣ್ ತಲೆಮರೆಸಿಕೊಂಡಿದ್ದು, ಕೃತ್ಯದಲ್ಲಿ ಭಾಗವಹಿದ್ದಾರೆ ಎನ್ನಲಾದ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ ಇಲಾಖೆ ಆದೇಶ ಹೊರಡಿಸಿದೆ.