ಬೆಳಗಾವಿ: ನನಗೆ ರಾಜಮೌಳಿ ರೀತಿ ಸಿನಿಮಾ ಮಾಡೋದು ಗೊತ್ತು, ತಂತ್ರಗಾರಿಕೆ ಮಾಡಿ ರಾಜಕಾರಣ ಮಾಡೋದೂ ಗೊತ್ತು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಗುಡುಗಿದ್ದಾರೆ.
ಗೋಕಾಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ರಿಪ್ಟ್ ಬರೆದು ನಿರ್ದೇಶನ ಮಾಡಿ ಸಿನಿಮಾ ಮಾಡುವುದು ಗೊತ್ತು. ತಂತ್ರಗಾರಿಕೆ ಮಾಡಿ ರಾಜಕಾರಣ ಮಾಡುವುದೂ ನನಗೆ ಗೊತ್ತು. 25 ವರ್ಷಗಳಿಂದ ನಾನು ರಮೇಶ್ ಜತೆಗಿದ್ದೆ. ಹೀಗಾಗಿ ನಾನು ಚುನಾವಣೆ ತಂತ್ರ ಬಹಿರಂಗಪಡಿಸಲ್ಲ. ಏಕೆಂದರೆ ನಮ್ಮ ತಂತ್ರಗಳನ್ನೇ ಬಳಸುವ ಎದುರಾಳಿಗಳು ಉಪಯೋಗ ಪಡೆಯುತ್ತಾರೆ ಎಂದರು.
ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ್ ಜಾರಕಿಹೊಳಿ ಗೇಮ್ ಪ್ಲ್ಯಾನ್ ಮಾಡಿದ್ದರು. ರಮೇಶ್ ಜಾರಕಿಹೊಳಿ ಇಷ್ಟು ದಿನ ನನಗೆ ಪ್ರೀತಿಯ ತಮ್ಮ ಎನ್ನುತ್ತಿದ್ದರು. ಆದರೆ ಈಗ ನನಗೆ ವೈರಿ, ಬೆನ್ನಿಗೆ ಚೂರಿ ಹಾಕಿದವ ಎನ್ನುತ್ತಿದ್ದಾರೆ. ನಾನು ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವುದೇ ಇದಕ್ಕೆ ಕಾರಣ ಎಂದರು. ರಮೇಶ್ ಜಾರಕಿಹೊಳಿ ದಿನಂಪ್ರತಿ ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಅವರ ಹೇಳಿಕೆಗೆ ಇನ್ಮುಂದೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ನಾನು ಮತ್ತು ಸತೀಶ್ ಜಾರಕಿಹೊಳಿ ರಾಮ, ಲಕ್ಷ್ಮಣ, ಕೃಷ್ಣ, ಅರ್ಜುನ ರೀತಿ ಇದ್ದೇವೆ. ಡಿಸೆಂಬರ್ ಐದಲ್ಲ, ಕೊನೆಯವರೆಗೂ ನಾನು ರಮೇಶ್ ಜಾರಕಿಹೊಳಿಗೆ ತಮ್ಮನಲ್ಲ. ರಮೇಶ್ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ. ಗೋಕಾಕ್ ಕ್ಷೇತ್ರ ಗೆದ್ದು, ಕಾಂಗ್ರೆಸ್ ಪಕ್ಷಕ್ಕೆ ಉಡುಗೊರೆಯಾಗಿ ಕೊಡ್ತೇವೆ ಎಂದು ಹೇಳಿದ್ರು.