ಬೆಳಗಾವಿ: ಭಕ್ತರ ಪ್ರವೇಶಕ್ಕೆ ನಿಷೇಧವಿದ್ದರೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ರೇಣುಕಾದೇವಿ ದರ್ಶನ ಪಡೆದರು.
ಉತ್ತರ ಕರ್ನಾಟಕದ ಶಕ್ತಿಕೇಂದ್ರ ಸವದತ್ತಿಯ ಯಲ್ಲಮನ ಗುಡ್ಡದ ರೇಣುಕಾದೇವಿ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ಹೀಗಿದ್ದರೂ ಪ್ರಮೋದ್ ಸಾವಂತ್ ಆಗಮಿಸುತ್ತಿದ್ದಂತೆ ದೇವಸ್ಥಾನ ತೆರೆಯಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. 2 ವರ್ಷದ ಅವಧಿಯಲ್ಲಿ ದೇವಸ್ಥಾನ ಕೇವಲ 18 ದಿನ ಮಾತ್ರ ತೆರೆದಿತ್ತು. ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನ ಬಂದ್ ಮಾಡಲಾಗಿದೆ. ಆದರೂ ರಾಜಕೀಯ ನಾಯಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನ ಆವರಣದೊಳಗೆ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನೀಡಿಲ್ಲ.
ಗೋವಾ ಸಿಎಂಗೆ ಸ್ಥಳೀಯ ಶಾಸಕ ಆನಂದ ಮಾಮನಿ ಸಾಥ್ ನೀಡಿದರು. ಮಹದಾಯಿ ವಿವಾದ ಇನ್ನೂ ನಡೆಯುತ್ತಿದೆ. ರಾಜ್ಯದ ರೈತರು, ಕನ್ನಡ ಪರ ಸಂಘಟನೆ ಮುಖಂಡರು ಮುತ್ತಿಗೆಯ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಗೋವಾ ಸಿಎಂ ದೇವಿ ದರ್ಶನ ಪಡೆದು ತೆರಳಿದರು. ಇತ್ತ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 23 ಸಾವಿರ ರನ್ ಗಳಿಸಿದ ವಿರಾಟ್ ಕೊಹ್ಲಿ.. ಅತಿ ವೇಗದ ರನ್ ಗಳಿಕೆಯಲ್ಲಿ ದಾಖಲೆ