ಬೆಳಗಾವಿ: ಸಿಡಿ ಪ್ರಕರಣದಿಂದಾಗಿ ಈ ಹಿಂದೆ ತಮ್ಮ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಇದೀಗ ರಮೇಶ್ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಅಭಿಮಾನಿಗಳು ಒಂಟೆ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಗೋಕಾಕ್, ಘಟಪ್ರಭಾ, ನಿಪ್ಪಾಣಿ ಸೇರಿದಂತೆ ಇತರ ಕಡೆಗಳಿಂದ ಆಗಮಿಸಿದ ರಮೇಶ ಜಾರಕಿಹೊಳಿ ಬೆಂಬಲಿಗರು ಒಂಟೆ ಮೇಲೆ ಕುಳಿತು ನಗರದ ಕೊಲ್ಲಾಪುರ ಸರ್ಕಲ್ ಮಾರ್ಗವಾಗಿ ರಾಣಿ ಚೆನ್ನಮ್ಮ ವೃತದ ಮೂಲಕ ಹಾಯ್ದು ಡಿಸಿ ಕಚೇರಿಗೆ ತೆರಳಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಮಾಡುವ ಭರದಲ್ಲಿದ್ದ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಸರಿಯಾಗಿ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಪಾಲಿಸದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಅಶೋಕ್ ಅವರು, ರಮೇಶ್ ಜಾರಕಿಹೊಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆದಷ್ಟು ಬೇಗ ಮುತುವರ್ಜಿ ವಹಿಸಿ ಮರಳಿ ಜಲ ಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂದು ಒತ್ತಾಯಿಸಿದರು.