ಬೆಳಗಾವಿ: ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆಗೆ ಬಂದಿದ್ದ, ಕೇಂದ್ರ ಅಧ್ಯಯನ ತಂಡಕ್ಕೆ ಸ್ಥಳೀಯರು ಘೇರಾವ್ ಹಾಕಿದ ಘಟನೆ ಗೋಕಾಕ್ ತಾಲೂಕಿನ ಲೋಳಸೂರ ಸೇತುವೆ ಬಳಿ ನಡೆಯಿತು.
ಅಧ್ಯಯನ ತಂಡದ ಅಧಿಕಾರಿಗಳ ಎದುರು ಸಮಸ್ಯೆ ಹೇಳಿಕೊಳ್ಳಲು ಮುಂದಾದ ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಹಾಗೂ ಮುಖಂಡರಿಗೆ ಅವಕಾಶ ದೊರೆಯಲಿಲ್ಲ. ಅವರೊಂದಿಗೆ ಮಾತನಾಡಲು ತಂಡದ ಅಧಿಕಾರಿಗಳು ನಿರಾಕರಿಸಿ ಕಾರಿನಲ್ಲಿ ಹೋಗಿ ಕುಳಿತರು. ಇದರಿಂದಾಗಿ ಸಿಟ್ಟಾದ ಮುಖಂಡರು ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಕಾರಿನ ಮುಂದೆ ಧರಣಿ ಕುಳಿತು, ಅಧಿಕಾರಿಗಳಿಗೆ ಧಿಕ್ಕಾರ ಹಾಕ ತೊಡಗಿದರು. ಮನವೊಲಿಕೆಗೆ ಮುಂದಾದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕೊಡಿ. ಅವರಿಗೆ ಕನ್ನಡ ತಿಳಿಯದಿದ್ದರೆ ಹಿಂದಿಯಲ್ಲೇ ಮಾತನಾಡುತ್ತೇವೆ. ಸಂತ್ರಸ್ತರ ಬವಣೆಗಳು ಅವರಿಗೆ ತಿಳಿಯಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇಷ್ಟಾದರೂ ತಂಡದ ಅಧಿಕಾರಿಗಳು ಕಾರಿನಿಂದ ಇಳಿಯಲಿಲ್ಲ. ಕೊನೆಗೆ ಎಲ್ಲ ವಿಷಯವನ್ನೂ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾಧಿಕಾರಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾಕಾರರು ಕಾರುಗಳು ಮುಂದೆ ಹೋಗಲು ಬಿಟ್ಟರು.