ಚಿಕ್ಕೋಡಿ : ಕಳೆದ ಮೂರು ತಿಂಗಳಿಂದ ಅಥಣಿ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಶಿರಗುಪ್ಪಿ ಗ್ರಾಮ ಜರ್ಮನ್ ತಂತ್ರಜ್ಞಾನದ ಮೂಲಕ ನೀರು ಶುದ್ಧೀಕರಿಸಿ ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಜೀವಿನಿಯಾಗಿದೆ.
ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದವರೆಗೆ ಬರುತ್ತಿದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್ ಜುಗೂಳ ಗ್ರಾಮದಲ್ಲಿದ್ದು, ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ.
ಇಲ್ಲಿ ಪ್ರತಿದಿನ ಸುಮಾರು 50 ಲಕ್ಷ ಲೀಟರ್ ನೀರನ್ನು ಜರ್ಮನ್ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ, ಇಂಗಳಿ, ಯಡೂರ, ಕಾಗವಾಡ, ಶೇಡಬಾಳ, ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ, ಬುಬನಾಳ, ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀ. ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ತಂಪಾಗಿರುವುದು ವಿಶೇಷ.
ಕೃಷ್ಣಾ ನದಿಯಿಂದ ಪಂಪ್‌ಸೆಟ್ ಮೂಲಕ ನೀರೆತ್ತಿ, ಆ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್ ತಂತ್ರಜ್ಞಾನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇದು ಸಂಪೂರ್ಣ ಆಟೋಮೆಟಿಕ್ ತಂತ್ರಜ್ಞಾನ ಹೊಂದಿದೆ. ಅದೇ ರೀತಿ ನೀರಿನ ಟ್ಯಾಂಕರುಗಳಲ್ಲಿ ನೀರು ಭರ್ತಿ ಆದ ಮೇಲೆ ನದಿ ತೀರದ ಮೋಟಾರ್ಗಳು ಸ್ವಯಂ ಬಂದ್ ಆಗುತ್ತವೆ. ಇನ್ನು, ನೀರು ಪೋಲಾಗದಂತೆ ನಿಗಾವಹಿಸಲು ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನೂ ಇಲ್ಲಿ ನೇಮಿಸಲಾಗಿದೆ.