ಅಥಣಿ: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಂದ ಇಲಾಖೆಗೆ ಯಾವುದೇ ಪ್ರಯೋಜನವಿಲ್ಲ, ಅನಾವಶ್ಯಕವಾಗಿ ಇರುವ ಹೊರ ಗುತ್ತಿಗೆ ನೌಕರರನ್ನು ನಾವು ತೆಗೆದು ಹಾಕುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬಿಜೆಪಿ ಶಾಸಕರ ಪ್ರತ್ಯೇಕ ಸಭೆ:
ಲಾಕ್ಡೌನ್ನಿಂದ ಎರಡು ತಿಂಗಳು ಯಾವುದೇ ಸಭೆ ನಡೆದಿಲ್ಲ. ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ನನ್ನ ಮನೆ ಹಾಗೂ ಉಮೇಶ್ ಕತ್ತಿ ಅವರ ಮನೆಯಲ್ಲಿ ಊಟ ಮಾಡಿಸಿದ್ದೇವೆ. ಇದಕ್ಕೆ ರೆಕ್ಕೆ ಪುಕ್ಕ ಕಟ್ಟುವುದು ಸರಿಯಿಲ್ಲ ಎಂದರು.
ರಾಜ್ಯಸಭಾ ಸದಸ್ಯ ವಿಚಾರ:
ಒಂದು ಸ್ಥಾನಕ್ಕೆ ಅನೇಕರು ಆಕಾಂಕ್ಷಿಗಳು ಇರುವುದು ಸಹಜ. ಪ್ರಭಾಕರ ಕೋರೆ ಅವರು ಮೊನ್ನೆ ಕರೆ ಮಾಡಿ ಮುಂದಿನ ಬಾರಿಯೂ ನನಗೆ ಅವಕಾಶ ನೀಡಿ ಎಂದು ಕೇಳಿದ್ದಾರೆ. ಈ ಕುರಿತು ನಾವು ಮುಖ್ಯಮಂತ್ರಿ ಅವರ ಜೊತೆ ಮಾತನಾಡಿದ್ದು ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೆಳಿದರು.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು:
ರಾಜ್ಯದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಯಾಕೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ, ಇಂದಿರಾ ಎಂದು ಹೆಸರು ಇಟ್ಟರು? ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಸೂಕ್ತ ಎಂದು ಎದೆ ತಟ್ಟಿ ಹೇಳುತ್ತೇನೆ ಎಂದರು.
ಸತೀಶ್ ಜಾರಕಿಹೊಳಿಗೆ ಬಿಜೆಪಿಗೆ ಸ್ವಾಗತ :
ಕಾಂಗ್ರೆಸ್ ಪಕ್ಷದವರು ಅಧಿಕಾರ ಆಸೆಗಾಗಿ ಸುಳ್ಳುಗಳನ್ನು ನಿಜ ಮಾಡುವುದಕ್ಕೆ ಹೊರಟಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಪಕ್ಷಕ್ಕೆ ಬರುವುದಾದರೆ ಬರಲಿ. ನಾವು ಸ್ವಾಗತ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.