ಬೆಳಗಾವಿ : ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ದಾಖಲೆ ಬರೆದಿದೆ. ಸತತ 30 ಗಂಟೆಗಳ ಕಾಲ ಗಣೇಶನನ್ನು ಮೆರವಣಿಗೆ ನಡೆಸಿ ಕುಂದಾನಗರಿ ಜನ ಅದ್ಧೂರಿಯಾಗಿ ಬೀಳ್ಕೊಟ್ಟರು. 10 ದಿನಗಳ ಕಾಲ ಭಕ್ತಿಯಿಂದ ಗಣಪತಿಯನ್ನು ಪೂಜಿಸಿದ ಭಕ್ತರು ಏಕದಂತನನ್ನು ಸಂಭ್ರಮದಿಂದ ನಿಮಜ್ಜನ ಮಾಡಿದರು. ಗುರುವಾರ ಸಂಜೆ 5 ಗಂಟೆಗೆ ಆರಂಭಗೊಂಡ ಮೆರವಣಿಗೆಯು ಶುಕ್ರವಾರ ರಾತ್ರಿ 9.45ರ ವರೆಗೂ ನಡೆಯಿತು. ಅಂದಾಜು 30 ಗಂಟೆಗೂ ಅಧಿಕ ಕಾಲ ಮೆರವಣಿಗೆ ನಡೆದಿದ್ದು ವಿಶೇಷವಾಗಿತ್ತು.
ನಗರದಾದ್ಯಂತ 378 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶಹಾಪುರದ ಕಪಿಲೇಶ್ವರ ದೇವಸ್ಥಾನದ ಬಳಿಯ ಹೊಸ ಮತ್ತು ಹಳೆಯ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡ, ಅನಗೋಳ ಕೆರೆ, ಕೋಟೆ ಕೆರೆ ಸೇರಿದಂತೆ 8 ಕಡೆಗಳಲ್ಲಿ ಮೂರ್ತಿಗಳನ್ನು ನಿಮಜ್ಜನ ಮಾಡಲಾಯಿತು. ಬೃಹದಾಕಾರದ ಮೂರ್ತಿಗಳನ್ನು ಕ್ರೇನ್ ಸಹಾಯದಿಂದ ನಿಮಜ್ಜನ ಮಾಡಿದರು.
ಕಣ್ಮನ ಸೆಳೆದ ಮೆರವಣಿಗೆ : ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮಳೆ ನಡುವೆಯೂ ಡಿಜೆ ಹಾಡುಗಳಿಗೆ ಯುವಕ-ಯುವತಿಯರು ಹುಚ್ಚೆದ್ದು ಕುಣಿದರು. ಗಣಪತಿ ಬಪ್ಪ ಮೋರಯಾ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಯುವಕರು ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಕೊನೆಯದಾಗಿ ಪಾಲಿಕೆ ಗಣಪನ ವಿಸರ್ಜನೆ : ನಗರದ ವಿವಿಧ ಮಂಡಳಿಗಳ ಗಣೇಶ ಮೂರ್ತಿಗಳ ನಿಮಜ್ಜನ ಮಾಡಿದ ಬಳಿಕ ಮಹಾನಗರ ಪಾಲಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕಪಿಲೇಶ್ವರದ ಹೊಸ ಹೊಂಡದಲ್ಲಿ ನಿಮಜ್ಜನ ಮಾಡಲಾಯಿತು.
ಜಿಲ್ಲಾಡಳಿತ, ಪೊಲೀಸ್, ಪಾಲಿಕೆ, ಅರಣ್ಯ, ಹೆಸ್ಕಾಂ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ಅವಿರತ ಶ್ರಮದಿಂದ ಬೆಳಗಾವಿಯಲ್ಲಿ ಗಣೇಶೋತ್ಸವ ಶಾಂತಿಯುತ ಮತ್ತು ಯಶಸ್ವಿಯಾಗಿ ಜರುಗಿತು. ಧರ್ಮವೀರ ಸಂಭಾಜಿ ವೃತ್ತದ ಬಳಿ ಮೆರವಣಿಗೆ ವೀಕ್ಷಿಸಲು ಸಾರ್ವಜನಿಕರಿಗೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿತ್ತು. ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ : ಬೆಳಗಾವಿಯಲ್ಲಿ ಇಂದು ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ : ಪಥ ಸಂಚಲನ ನಡೆಸಿದ ಪೊಲೀಸರು
ರಾಜ್ಯದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುವ ಬೆಳಗಾವಿಯಲ್ಲಿ ನಿಮಜ್ಜನ ಮೆರವಣಿಗೆ ಹೊಸ ಇತಿಹಾಸ ನಿರ್ಮಿಸಿದೆ. ಸತತ 30 ಗಂಟೆಗಳ ಕಾಲ ಶಾಂತಿಯುತವಾಗಿ ಮೆರವಣಿಗೆ ನಡೆದಿದ್ದು, ಯುವಕ-ಯುವತಿಯರು ಡಿಜೆ ಹಾಡುಗಳಿಗೆ ಸಖತ್ ಸ್ಪೆಪ್ ಹಾಕಿ ಸಂಭ್ರಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೇಯರ್ ಶೋಭಾ ಸೋಮನ್ನಾಚೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಶಿವಮೊಗ್ಗ ಹಿಂದೂ ಮಹಾ ಮಂಡಳಿ ಗಣಪತಿ ನಿಮಜ್ಜನ ಮೆರವಣಿಗೆ ಪ್ರಾರಂಭ : ಸಾವಿರಾರು ಮಂದಿ ಭಾಗಿ