ಬೆಳಗಾವಿ : ನೂತನ ಕೃಷಿ ಮಸೂದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ಮಾಡಲಾಗಿದೆ. ಪೊಲೀಸರು ಮನೆ ಮನೆಗೆ ಬಂದು ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹೊಲಕ್ಕೆ ಬುತ್ತಿ ಕೊಡಲು ಹೋಗುತ್ತಿದ್ದ ರೈತರನ್ನು ತಡೆದು ದಂಡ ಕಟ್ಟಿಸಿಕೊಂಡಿದ್ದಾರೆ. ಹೆಲ್ಮೆಟ್ ಹಾಕಿಲ್ಲ, ವಾಹನದ ದಾಖಲೆಗಳಿಲ್ಲ ಎಂದು ದಂಡ ವಿಧಿಸಿದ್ದಾರೆ.
ಆ ಎಲ್ಲ ರಸೀದಿಗಳನ್ನು ಅವರು ಮಾಧ್ಯಮ ಮುಂದೆ ಪ್ರದರ್ಶಿಸಿದರು. ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ನಿನ್ನೆ ಮನವಿ ಮಾಡಿದ್ದೆವು. ಇದಕ್ಕೆ ನಗರ ಪೊಲೀಸರು ಒಪ್ಪಿಗೆ ಸೂಚಿಸಿದ್ದರು. ಆದರೆ, ಇಂದು ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸರ್ಕಾರವೇ ಹೊಣೆ. ಒಂದೂವರೆ ವರ್ಷ ಕಾಯ್ದೆ ಜಾರಿ ತರಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದರ ಮೇಲೆ ನಮಗೆ ವಿಶ್ವಾಸ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮೇಲೆ ನಮಗೆ ನಂಬಿಕೆ ಇಲ್ಲ.
ಕೂಡಲೇ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದ್ರೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ ಸರ್ಕಾರ ಒಳ್ಳೆಯದನ್ನೇ ಮಾಡಿದೆ. ಸರ್ಕಾರವೇ ರೈತರ ಕ್ರಾಂತಿ ಕಿಡಿ ಹೊತ್ತಿಸಿದೆ.
ಪಕ್ಕದ ಜಿಲ್ಲೆ ಧಾರವಾಡದಲ್ಲಿ ಹಲವಾರು ಟ್ರ್ಯಾಕ್ಟರ್‌ಗಳು ಸೇರಿವೆ. ಬೆಳಗಾವಿ ದೇಶದ ಭಾಗವೋ ಇಲ್ಲವೋ ಎಂದು ತೋರಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಪೊಲೀಸರಿಗೆ ತಿಳಿಸಿದ್ದೆವು. ನಾವು ಅನ್ನ ಕೊಟ್ಟವರೇ ಹೊರತು ಬಡವರಲ್ಲ. ಎಲ್ಲದಕ್ಕೂ ರೈತರು ತಯಾರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.