ಚಿಕ್ಕೋಡಿ: ಮಾಜಿ ಸಂಸದ ಅಮರಸಿಂಹ ಪಾಟೀಲರ ಕುಟುಂಬ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 10 ಲಕ್ಷ ರೂ. ದೇಣಿಗೆ ನೀಡಿದೆ. ಆರ್ಎಸ್ಎಸ್ ಪ್ರಮುಖರಿಗೆ ದೇಣಿಗೆ ಹಣವನ್ನು ನೀಡಲಾಯಿತು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದರ ಕುಟುಂಬ ದೇಣಿಗೆ ಹಣ ನೀಡಿತು.
ಬಳಿಕ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತಿಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ದೇಣಿಗೆ ಸಂಗ್ರಹವಾಗುತ್ತಿದೆ. ನಾನೂ ಕೂಡಾ 10 ಲಕ್ಷ ರೂ. ದೇಣಿಗೆ ನೀಡಿದ್ದೇನೆ ಎಂದರು.
ನಂತರ ವಿಶ್ವ ಹಿಂದೂ ಪರಿಷತ್ನ ಕ್ಷೇತ್ರೀಯ ಸಂಘಟನಾ ಮಹಾಮಂತ್ರಿ ಕೇಶವ ಹೆಗಡೆ ಮಾತನಾಡಿ, ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಲಿದ್ದು, ರಾಮ ಕಥಾ ಪಾರ್ಕ್, ರಾಮಾಯಣ ಕಥೆಯ ಪ್ರದರ್ಶನಕ್ಕಾಗಿ ಚಿತ್ರಮಂದಿರಗಳು ನಿರ್ಮಾಣವಾಗಲಿದೆ. 2023 ರಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಆಗುವುದು ನಿಶ್ಚಿತ ಎಂದರು.