ಬೆಳಗಾವಿ : ಭವಾನಿ ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ. ತಾವಿದ್ದ ಕಾರಿಗೆ ಗುದ್ದಿದ ಬೈಕ್ ಸವಾರನಿಗೆ ಭವಾನಿ ರೇವಣ್ಣ ಬೈದಿರುವ ಬಗ್ಗೆ ಪ್ರತಿಕ್ರಿಯಿಸಿ, ಬೈಕ್ ಸವಾರನೇ ಒಂದು ಬದಿಯಿಂದ ಬಂದು ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು?. ಅವರು ಏನೂ ಅಹಂಕಾರದಿಂದ ಮಾತಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಹೀಗಾಗಿ ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ ಕುಟುಂಬದವರಿಂದ ಯಾರಿಗೂ ನೋವು ಮಾಡುವ ಕೆಲಸ ಆಗಿಲ್ಲ ಎಂದು ಹೇಳಿದ್ದಾರೆ.
ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು?. ಅಪಘಾತದ ವಿಡಿಯೋವನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ ಸವಾರನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು?. ಆದ್ದರಿಂದ ಭವಾನಿ ಅವರ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ.
ಅಪಘಾತದ ಕುರಿತು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ವಾಹನ ಅಪಘಾತ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ?. ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ?. ಇನ್ಷುರೆನ್ಸ್ ಗಾಗಿ ದೂರು ನೀಡಿದ್ದಾರೆ ಅಷ್ಟೇ. ಬೈಕ್ ಸವಾರನಿಂದ ಕಾರಿನ ಹಾನಿಯ ಮೊತ್ತ ಕೇಳುವುದಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.
ಬೈಕ್ ಸವಾರ ಕುಡಿದಿದ್ದ. ಕುಡಿದು ಬಂದು ಕಾರಿಗೆ ಮುಂದಿನಿಂದ ಗುದ್ದಿದ್ದಾನೆ. ಈತನಿಂದ ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ?. ಎಷ್ಟೇ ನಿಧಾನವಾಗಿ ಹೋಗಿದ್ದರೂ ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಷಯ ಮಾಡುವುದು ಬೇಡ ಎಂದು ಹೇಳಿದರು.
ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿರಲಿಲ್ಲ. ಅವರ ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ. ಬೈಕ್ ಸವಾರ ಮದ್ಯ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು, ಕ್ರಮ ಕೈಗೊಳ್ಳಲ್ಲ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಭವಾನಿ ರೇವಣ್ಣ ಇದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ : ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ರಾಂಪುರ ಜಂಕ್ಷನ್ ಬಳಿ ಭಾನುವಾರ ನಡೆದಿತ್ತು. ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ : ಕಾರಿಗೆ ಗುದ್ದಿದ ಬೈಕ್ ಸವಾರನ ಮೇಲೆ ಗದರಿದ ಭವಾನಿ ರೇವಣ್ಣ: ವಿಡಿಯೋ ವೈರಲ್