ಬೆಳಗಾವಿ/ಬೆಂಗಳೂರು : ವರ್ಗಾವಣೆ ದಂಧೆ ಸೇರಿ ಬೇರೆ ಬೇರೆ ವಿಚಾರಗಳ ಬಗ್ಗೆ ಮುಂದಿನ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತೇನೆ. ಒಂದು ವೇಳೆ ವೈಯಕ್ತಿಕವಾಗಿ ಕೆಣಕಿದ್ರೆ ನಾನು ಸುಮ್ನೆ ಇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನಕ್ಕೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಬರ ನಿರ್ವಹಣೆ, ಉತ್ತರ ಕರ್ನಾಟಕ ಅಭಿವೃದ್ಧಿ ನನ್ನ ಆದ್ಯತೆ. ಈ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ಮಾತನಾಡುತ್ತೇನೆ. ಈ ಭಾಗದ ಜನರು ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದಾರೆ. ಈ ಸಂಬಂಧ ನಾವು ಮತ್ತು ಬಿಜೆಪಿ ಜಂಟಿಯಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಅಧಿಕೃತ ವಿರೋಧ ಪಕ್ಷ ಎಂದರು.
ಜನವರಿಯಲ್ಲಿ ಜಂಟಿ ಅಧಿವೇಶನ ಇದೆ. ವರ್ಗಾವಣೆ ದಂಧೆ ಸೇರಿ ಬೇರೆ ಬೇರೆ ವಿಚಾರಗಳ ಬಗ್ಗೆ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತೇನೆ. ಒಂದು ವೇಳೆ ವೈಯಕ್ತಿಕವಾಗಿ ಕೆಣಕಿದ್ರೆ ನಾನು ಸುಮ್ನೆ ಇರಲ್ಲ. ಸರ್ಕಾರ ಬಂದು ಆರು ತಿಂಗಳು ಆಗಿದೆ. ಇನ್ನು ನಾಲ್ಕೂವರೆ ವರ್ಷ ಸರ್ಕಾರ ಇರುತ್ತೆ. ಹಂತ ಹಂತವಾಗಿ ಎಲ್ಲ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದರು.
ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ. ಅನೇಕ ಜನರು ಈ ಬಗ್ಗೆ ಹೇಳಿದ್ದಾರೆ. ಬಲಿಷ್ಠ ನಾಯಕತ್ವ ಬೇಕು ಎಂದು ಜನರು ಅಪೇಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಸಚಿವರ ಗೈರು ಹಾಜರಿಗೆ ಪ್ರತಿಪಕ್ಷ ನಾಯಕರ ಆಕ್ಷೇಪ : ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪ ಇಂದು ಆರಂಭವಾದಾಗ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಸದನದಲ್ಲಿ ಆಡಳಿತ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿದ್ದ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು, ಆ ಸದಸ್ಯರನ್ನು ಕುಳಿತುಕೊಳ್ಳುವಂತೆ ಹೇಳಿದರು.
ಆಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಪ್ರವೇಶಿಸಿ, ಸ್ಪೀಕರ್ ಅವರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಚಾಟಿ ಬೀಸದಿದ್ದರೆ ಐದು ವರ್ಷಗಳ ಕಾಲ ಸ್ಪೀಕರ್ ಆಗೇ ಉಳಿಯಬೇಕಾಗುತ್ತದೆ. ಯಾವತ್ತೂ ಸಚಿವರನ್ನಾಗಿ ಮಾಡಲ್ಲ ಎಂದರು. ಆಗ ಸ್ಪೀಕರ್ ಯು.ಟಿ.ಖಾದರ್, ಕೇವಲ ಮಂತ್ರಿಯಾಗುವ ಉದ್ದೇಶಕ್ಕೆ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ತಾನು ಹಾಗೆ ಮಾಡುವುದು ಸಾಧ್ಯವೇ ಇಲ್ಲ ಎಂದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಎದ್ದು ನಿಂತು, ಸದನ ಆರಂಭಗೊಳ್ಳುವ ಮೊದಲು ಎಲ್ಲರೂ ಒಳಗೆ ಬಂದು ಕೂರಬೇಕೆಂದು ನಿನ್ನೆ ಸ್ಪೀಕರ್ ಎಲ್ಲರಿಗೂ ತಿಳಿಸಿದ್ದರೂ ಸಚಿವರ ಸ್ಥಾನಗಳೆಲ್ಲಾ ಖಾಲಿ ಇವೆ. ತಾವು ಯಾರನ್ನು ಪ್ರಶ್ನಿಸುವುದೆಂದು ಕೇಳಿದರು. ಅದಕ್ಕೆ ಸ್ಪೀಕರ್ ಅವರು, ನಾವು ಕಾರ್ಯಕಲಾಪ ಆರಂಭ ಮಾಡೋಣ, ಸಚಿವರು ಬಂದು ನಮ್ಮನ್ನು ಸೇರಿಕೊಳ್ಳುತ್ತಾರೆ ಎಂದು ಹೇಳಿ ಪ್ರಶ್ನೋತ್ತರ ಕೈಗೆತ್ತಿಕೊಂಡರು.
ಇದನ್ನೂ ಓದಿ : ವಿಧಾನ ಪರಿಷತ್ನಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಗದ್ದಲ; ಪರಿಸ್ಥಿತಿ ತಿಳಿಗೊಳಿಸಿದ ಸಭಾಪತಿ ಹೊರಟ್ಟಿ