ಅಥಣಿ: ಇಡೀ ದೇಶ ಕೊರೊನಾದಿಂದ ಹೊರಬರಲು ಪರದಾಡುತ್ತಿದ್ದು, ಅನೇಕರು ಸಹಾಯಹಸ್ತ ಚಾಚುತ್ತಿದ್ದಾರೆ. ಅದೇ ರೀತಿ ಅಥಣಿಯಲ್ಲಿನ ರೈತ ಕುಟುಂಬವೊಂದು ಕೋವಿಡ್ ವಾರಿಯರ್ಸ್ ಹಾಗೂ ಸೋಂಕಿತರಿಗೆ ಮತ್ತು ಬಡ ಕುಟುಂಬಗಳಿಗೆ ದಿನನಿತ್ಯ 500 ಪ್ಯಾಕೆಟ್ ಉಪಾಹಾರ ವಿತರಣೆ ಮಾಡುತ್ತಿದ್ದಾರೆ.
ಅಥಣಿ ಹೊರವಲಯದಲ್ಲಿ ವಾಸವಿರುವ ಠಕ್ಕನವರ ರೈತ ಕುಟುಂಬ ಯಾವುದೇ ಪ್ರಚಾರ, ಫಲಾಪೇಕ್ಷೆ ಇಲ್ಲದೇ ಕಳೆದ ಏಳೆಂಟು ದಿನದಿಂದ ಈ ಸತ್ಕಾರ್ಯ ಮಾಡುತ್ತಿದೆ. ದಿನನಿತ್ಯ ಮನೆಮಂದಿಯೇ 500 ಜನಕ್ಕೆ ಆಗುವಷ್ಟು ಬಗೆಬಗೆಯ ತಿಂಡಿ ತಯಾರು ಮಾಡುತ್ತಿದ್ದಾರೆ. ಬಳಿಕ ಈ ಆಹಾರವನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್, ಕಾರ್ಮಿಕರು, ನಿರ್ಗತಿಕರು ಹಾಗು ಭಿಕ್ಷುಕರಿಗೆ ವಿತರಣೆ ಮಾಡುತ್ತಿದ್ದಾರೆ.
"ಸರ್ಕಾರ ಲಾಕ್ಡೌನ್ ತೆರವು ಮಾಡುವವರೆಗೆ ನಮ್ಮ ಸೇವೆ ಮುಂದುವರಿಯಲಿದೆ. ಕೋವಿಡ್ ಉಲ್ಬಣದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅದೆಷ್ಟೋ ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಶರಣ ಸಂಸ್ಕೃತಿ ನಂಬಿಕೊಂಡು ಬಂದ ನಮ್ಮ ಕುಟುಂಬ ಕಷ್ಟಕಾಲದಲ್ಲಿ ಇತರರಿಗೆ ಕೈಲಾದ ಸಹಾಯ ಮಾಡುತ್ತಿದೆ." - ಯುವ ರೈತ ಹಾಗೂ ಉದ್ಯಮಿ ಧರೇಪ್ಪ ಠಕ್ಕಣ್ಣವರ
ಇದನ್ನೂ ಓದಿ: ಕಾಸರಕೋಡಿನಲ್ಲಿ ಕಡಲಾಮೆ ಮರಿಗಳ ಸಂರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ
"ಪ್ರತಿನಿತ್ಯವೂ ಮನೆಯವರೇ ಸೇರಿ ಅಡುಗೆ ಮಾಡಿಕೊಡುತ್ತೇವೆ. ಅಥಣಿ ಪಟ್ಟಣದ ಕೆಲವೆಡೆ ಅದನ್ನು ಹಂಚಿ ಬರುತ್ತಿದ್ದು, ನಮಗೆ ಬಹಳ ಸಂತೋಷವಾಗಿದೆ. ಬಡತನದಿಂದಾಗಿ ನಾವೂ ಕೂಡ ಊಟವಿಲ್ಲದೆ ಅದೆಷ್ಟೋ ಕಷ್ಟಗಳನ್ನು ಎದುರಿಸಿದ್ದೆವು. ದೇವರ ದಯೆಯಿಂದ ಸದ್ಯ ಆರ್ಥಿಕವಾಗಿ ಸದೃಢವಾಗಿದ್ದೇವೆ. ಇತರರಿಗೆ ಹಂಚಿ ತಿನ್ನುವುದೇ ಧರ್ಮ."
-ಧರೇಪ್ಪ ಠಕ್ಕಣ್ಣವರ ತಾಯಿ ಚಂದ್ರವ್ವ ಶಿವಪ್ಪಾ ಠಕ್ಕಣ್ಣವರ