ಅಥಣಿ: ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ರಾಜ್ಯದ ನದಿ ಪಾತ್ರದ ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ನೂರಾರು ಗ್ರಾಮಗಳಲ್ಲಿ ಈಗಾಗಲೇ ಪ್ರವಾಹ ಸ್ಥಿತಿ ನಿರ್ಮಾವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ವರ್ಷವೂ ನಾಲ್ಕೈದು ಜಿಲ್ಲೆಗಳ ಜನರ ಬದುಕು ಛಿದ್ರಗೊಳ್ಳುವ ಆತಂಕ ಎದುರಾಗಿದೆ.
ನಿರಂತರ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ನದಿ ಭೋರ್ಗರೆದು ಹರಿದು ಅಥಣಿ ಜನರ ನಿದ್ದೆಗೆಡಿಸಿದೆ. ತಾಲೂಕಿನ 14 ಗ್ರಾಮದಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಈಗಾಗಲೇ ಕೆಲವು ಗ್ರಾಮಗಳು ಜಲಾವೃತವಾಗಿವೆ. ಜೀವ ರಕ್ಷಣೆಗಾಗಿ ಜನರು ಜಾನುವಾರಗಳ ಜತೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಗ್ರಾಮ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದ್ದು, ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ.
ತಾಲೂಕಿನ ಝುಂಜರವಾಡ, ಅವರಖೋಡ, ಹುಲಬಾಳ, ಜನವಾಡ, ಮಹಿಷವಾಗಡಿ, ತಿರ್ಥ, ಗ್ರಾಮಗಳು ಜಲಾವೃತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಗಂಜಿ ಕೇಂದ್ರಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರು ಗ್ರಾಮಗಳಲ್ಲಿಯೇ ಉಳಿದಿದ್ದು, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಗ್ರಾಮಸ್ಥರ ಮನ ವೊಲಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜನರು ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019 ರ ಕೃಷ್ಣಾ ನದಿ ಪ್ರವಾಹದಿಂದ ಆಸ್ತಿ ಪಾಸ್ತಿ ಮನೆ ಮಠ ಕಳೆದುಕೊಂಡಿದ್ದ ನೆರೆ ಸಂತ್ರಸ್ತರ ಬದುಕು ಹಸನಾಗುವ ಮುನ್ನವೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಅಥಣಿ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುದರಿಂದ ನದಿ ಪಾತ್ರದ ಸಾವಿರಾರು ಹೆಕ್ಟರ್ ಕಬ್ಬು ಬೆಳೆ ನಾಶವಾಗಿದೆ. ಕಣ್ಣಾರೆ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಂಡು ರೈತರು ಮಮ್ಮಲ ಮರಗುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಜನರ ಮೇಲೆ ವರುಣನ ಮುನಿಸು; ನೆರೆಗೆ ನಲುಗಿದ ಜನತೆ