ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಬಂದು ಹೋಗಿ ಎರಡು ತಿಂಗಳಾಗಿದೆ. ಹಲವರು ಮನೆ ಕಳೆದುಕೊಂಡಿದ್ದಾರೆ. ಸದ್ಯ ಇವರೆಲ್ಲ ಪಡಿತರ ಚೀಟಿಗಾಗಿ ನಿತ್ಯ ಆಹಾರ ಇಲಾಖೆಯ ಎದುರು ಕ್ಯೂ ನಿಲ್ಲುವ ದುಃಸ್ಥಿತಿ ಎದುರಾಗಿದೆ.
ಪ್ರವಾಹದಲ್ಲಿ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಮನೆ ಬಿಟ್ಟು ಬಂದವರ ದಾಖಲೆಗಳು ಹೊಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಸದ್ಯ ಪಡಿತರ ಚೀಟಿ ಇಲ್ಲದೇ ತಿಂಗಳ ರೇಷನ್ ಕೂಡ ಸಿಗುತ್ತಿಲ್ಲ. ಹೀಗಾಗಿ ಹೊಸ ಪಡಿತರ ಚೀಟಿ ಮತ್ತು ಹಳೆಯ ಪಡಿತರ ಚೀಟಿಯ ನಕಲು ಪ್ರತಿ ಪಡೆಯಲು ಜನರು ಆಹಾರ ಇಲಾಖೆಗೆ ನಿತ್ಯ ಅಲೆದಾಡುವಂತಾಗಿದೆ.
ಒಂದು ಕಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದರಿಂದ ಅತ್ತ ಕೂಲಿ ಕೆಲಸವೂ ಸಿಗದೇ, ಇತ್ತ ಕಡೆ ರೇಷನ್ ಕೂಡ ಸಿಗದೇ ಸಂತ್ರಸ್ತರ ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿದೆ. ಪಡಿತರ ಚೀಟಿಗಾಗಿ ಹಗಲು ರಾತ್ರಿ ಎನ್ನದೇ ಅಥಣಿ ತಹಶೀಲ್ದಾರರ ಕಚೇರಿ ಎದುರು ವಾಸ್ತವ್ಯ ಹೂಡುತ್ತಿದ್ದಾರೆ.
ಇನ್ನು ಅಧಿಕಾರಿಗಳು ಮಧ್ಯಾಹ್ನ ಒಂದು ಗಂಟೆಗೆ ಬಂದು ನಾಲ್ಕು ಗಂಟೆಗೆ ಮನೆಗೆ ತೆರಳುತ್ತಿದ್ದು, ಸರ್ವರ್ ಬ್ಯೂಸಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.