ಚಿಕ್ಕೋಡಿ: ಹುಟ್ಟಿನಿಂದಲೇ ಈ ವಿದ್ಯಾರ್ಥಿನಿ ಅಂಧೆ. ತನ್ನ ಸಹೋದರ, ಸಹೋದರಿ ಕೂಡಾ ಅಂಧರು. ಆದರೆ, ಈ ಮೂವರು ಕೂಡಾ ಶಾಲೆಯಲ್ಲಿ ಉತ್ತಮ ಅಂಕ ಪಡೆದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ.
ಕೊನೆಯ ಅಂಧ ವಿದ್ಯಾರ್ಥಿನಿ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 603 ಅಂಕ ಪಡೆದು ಶಿವಮೊಗ್ಗ ಜಿಲ್ಲೆಯ ಶಾರದಾದೇವಿ ಅಂಧವಿಕಾಸ ಕೇಂದ್ರಕ್ಕೆ ಮೊದಲ ಸ್ಥಾನ ಪಡೆದಿದ್ದಳು. ಆದರೆ, ಈ ಅಂಧ ವಿದ್ಯಾರ್ಥಿಗೆ ಇನ್ನೂ ಹೆಚ್ಚು ಅಂಕ ಬರುತ್ತವೆ ಎಂದು ಮರು ಮೌಲ್ಯ ಮಾಪನ ಮಾಡಿಸಿ 625 ಕ್ಕೆ 617 ಅಂಕ ಪಡೆದು ಅಂಧ ಮಕ್ಕಳ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಹೆತ್ತ ತಂದೆ ತಾಯಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಹೌದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಾಹುಬಲಿ ಟೋಪಗಿ ಹಾಗೂ ರೋಹಿಣಿ ಟೋಪಗಿ ಅವರ ಮೂರನೇ ಪುತ್ರಿ ಅಪೂರ್ವ ಟೋಪಗಿ ರಾಜ್ಯಕ್ಕೆ ಅಂಧ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ಸಾಧಕಿ. ಇತರೆ ಅಂಧ ಮಕ್ಕಳಿಗೆ ಈಕೆ ಮಾದರಿಯಾಗಿದ್ದಾಳೆ. ಅಪೂರ್ವ ಶಿವಮೊಗ್ಗ ಜಿಲ್ಲೆಯ ಶಾರದಾದೇವಿ ಅಂಧವಿಕಾಸ ಕೇಂದ್ರದಲ್ಲಿ ಹತ್ತನೆ ತರಗತಿ ಮುಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅಪೂರ್ವ ಟೋಪಗಿ ಕನ್ನಡ - 125, ಇಂಗ್ಲಿಷ್ - 96, ಹಿಂದಿ - 98, ಅರ್ಥಶಾಸ್ತ್ರ - 100, ರಾಜ್ಯಶಾಸ್ತ್ರ-100, ಸಮಾಜ ವಿಜ್ಞಾನ - 98 ಅಂಕ ಪಡೆದುಕೊಂಡಿದ್ದಾಳೆ.
ತಾಯಿಯ ಪ್ರೋತ್ಸಾಹದಿಂದ ಎಲ್ಲರೂ ಹುಬ್ಬೇರಿಸುವಂತೆ ಸಾಧನೆಯ ಹೆಜ್ಜೆಗಳನ್ನು ಇಡುತ್ತಿರುವ ಅಪೂರ್ವ ಐಎಎಸ್ ಅಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದಾಳೆ. ದಿನದಲ್ಲಿ ಮೂರರಿಂದ ನಾಲ್ಕು ಗಂಟೆ ಮಾತ್ರ ಓದುತ್ತಿದ್ದೆ. ನನ್ನ ಸಾಧನೆಗೆ ಯಾವತ್ತೂ ಕೂಡಾ ಅಂಧತ್ವ ಅಡ್ಡಿಯಾಗಿಲ್ಲ ಎನ್ನುತ್ತಾಳೆ ಅಪೂರ್ವ.
ನನ್ನ ತಂದೆ-ತಾಯಿ ಹಾಗೂ ಗುರುಗಳ ಆಶೀರ್ವಾದ ನನ್ನ ಈ ಒಂದು ಸಾಧನೆಗೆ ಸಹಕಾರಿಯಾಗಿದೆ. ಎಲ್ಲರೂ ಸಾಧನೆ ಮಾಡಿದವರ ಪುಸ್ತಕ ಓದುವ ಬದಲು ಜೀವನದಲ್ಲಿ ಫೇಲ್ ಆದವರ ಪುಸ್ತಕ ಓದಿ. ಆಗ ಜೀವನ ಹೇಗೆ ಎನ್ನುವುದು ಗೊತ್ತಾಗುತ್ತದೆ. ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರವಲ್ಲ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾಳೆ ಅಂಧ ವಿದ್ಯಾರ್ಥಿನಿ ಅಪೂರ್ವ ಟೋಪಗಿ.
ಒಟ್ಟಿನಲ್ಲಿ ಓದುವ ಹವ್ಯಾಸ ಸಾಧನೆ ಮಾಡುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅಪೂರ್ವ ಟೋಪಗಿ ತೋರಿಸಿಕೊಟ್ಟಿದ್ದಾಳೆ ಹಾಗೂ ಇತರ ಅಂಧ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಅವಳ ಭವಿಷ್ಯ ಉಜ್ವಲವಾಗಲಿ ಎಂದು ಈಟಿವಿ ಭಾರತ ಕಡೆಯಿಂದ ಹಾರೈಸುತ್ತೇವೆ.