ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ತಾಲೂಕಿನ ಬೆಳಗುಂದಿ ಗ್ರಾಮದ 70 ವರ್ಷದ ವ್ಯಕ್ತಿ ಸಂಪೂರ್ಣವಾಗಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ವ್ಯಕ್ತಿ ಶೀಘ್ರವೇ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ. ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಈ ವ್ಯಕ್ತಿ ಪಾಲ್ಗೊಂಡಿದ್ದರು. ಸಭೆ ಬಳಿಕ ದೆಹಲಿಯಿಂದ ಸಂಪರ್ಕ ಕ್ರಾಂತಿ ರೈಲಿನಲ್ಲಿ ಮಾರ್ಚ್ 19ರಂದು ಬೆಳಗಾವಿಗೆ ಬಂದಿದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.
ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದ ಈ ವ್ಯಕ್ತಿಯನ್ನು ಮಾರ್ಚ್ 30ರಂದು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ, ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿತ್ತು. ಏಪ್ರಿಲ್ 3ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈತ 126ನೇ ಸೋಂಕಿತ ವ್ಯಕ್ತಿ ಆಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದರು.
ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶೆಟ್ಟರ್:
ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಗೆ ಮಂಜೂರಾಗಿರುವ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯ ಆವರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿನ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗಿರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ ಈಗಾಗಲೇ ಅನುಮತಿ ದೊರೆತಿದೆ. ಈ ಹಿನ್ನೆಲೆ ಮುಂದಿನ ಪ್ರಕ್ರಿಯೆ ಕುರಿತು ಸಂಸ್ಥೆಯ ನಿರ್ದೇಶಕರ ಜತೆ ಸಚಿವರು ಚರ್ಚೆ ನಡಸಿ, ಪ್ರಯೋಗಾಲಯ ಮಂಜೂರಾಗಿರುವುದರಿಂದ ಅಗತ್ಯ ಸಾಮಗ್ರಿ ಮತ್ತು ಕಿಟ್ಗಳನ್ನು ತಕ್ಷಣವೇ ದೊರಕಿಸಲಾಗುವುದು. ಶೀಘ್ರವೇ ಪ್ರಯೋಗಾಲಯ ಆರಂಭಿಸಬೇಕು ಎಂದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಪ್ರಯೋಗಾಲಯ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗಿದೆ. ಯಾವುದೇ ರೀತಿಯ ಹೆಚ್ಚಿನ ನೆರವು ಅಗತ್ಯವಿದ್ದರೆ ಕೂಡಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ದೇವಪ್ರಸಾದ ಚಟ್ಟೋಪಾಧ್ಯಾಯ ಮಾತನಾಡಿ, ಗಂಟಲು ದ್ರವ ಮಾದರಿ ಪರೀಕ್ಷೆಯ ಕಿಟ್, ಮತ್ತಿತರ ಅಗತ್ಯ ಸಾಮಗ್ರಿಗಳು ಸೋಮವಾರ ಬರಲಿದ್ದು, ಬಂದ ತಕ್ಷಣವೇ ಪರೀಕ್ಷೆ ಆರಂಭಿಸಲಾಗುವುದು. ನೂತನ ಪ್ರಯೋಗಾಲಯ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.