ಬೆಳಗಾವಿ: ರಾಜ್ಯಮಟ್ಟದ ಕಿತ್ತೂರು ಉತ್ಸವದ ಜತೆಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಂಗಡಿ ಮಾಲೀಕರೊಬ್ಬರು ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಕಿತ್ತೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ನಿವಾಸಿ ಶಬ್ಬೀರ್ ಬೀಡಿ ಎಂಬುವವರಿಗೆ ಸೇರಿದ ಅಂಗಡಿಗೆ ಬೆಂಕಿ ಬಿದ್ದಿದೆ. ಪಟಾಕಿ ಕಿಡಿ ಸಿಡಿಯುತ್ತಿದ್ದಂತೆ ಧಗಧಗನೇ ಕುಶನ್ ಅಂಗಡಿ ಹೊತ್ತಿ ಉರಿದಿದ್ದು, ಅಂದಾಜು 3 ಲಕ್ಷ ಮೌಲ್ಯದ ಕುಶನ್, ಪೀಠೋಪಕರಣ ಬೆಂಕಿಗೆ ಆಹುತಿಯಾಗಿವೆ. ನಿನ್ನೆ ದೀಪಾವಳಿ ನಿಮಿತ್ತ ಶಬ್ಬೀರ್ ಬೀಡಿ ಅಂಗಡಿ ಮಾಲೀಕರು ದೀಪಾವಳಿ ಪೂಜೆ ಮಾಡಿದ್ದಾರೆ.
ಬಳಿಕ ಪಟಾಕಿ ಸಿಡಿಸಲು ಮುಂದಾದಾಗ ಅದರ ಕಿಡಿ ಪಕ್ಕದ ಕುಶನ್ ಅಂಗಡಿಗೆ ವ್ಯಾಪಿಸಿದೆ. ಬೆಂಕಿ ನಂದಿಸಲು ಹೋದ ಶಬ್ಬೀರ್ ಕೈ, ಕಾಲು ದೇಹದ ಇತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಬ್ಬದ ಮೊದಲ ದಿನದ ಸಿಡಿಮದ್ದು ದುರಂತ.. 11 ಮಂದಿಗೆ ಗಾಯ