ಬೆಳಗಾವಿ: ವಿದ್ಯುತ್ ಕಂಬಕ್ಕೆ ಸಪೋರ್ಟಿವ್ ಆಗಿ ಕಟ್ಟಿದ್ದ ಅರ್ಥಿಂಗ್ ವೈಯರ್ ಸ್ಪರ್ಶಿಸಿದ ಪರಿಣಾಮ ತಂದೆ ಹಾಗೂ ಮಗ ಮೃತಪಟ್ಟಿರುವ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಪ್ರಭು ಹುಂಬಿ (68), ಮಂಜುನಾಥ ಹುಂಬಿ (29) ಮೃತ ದುರ್ದೈವಿಗಳು.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿಗಿದಿದ್ದ ವೈಯರ್ ತಂದೆ ಹಿಡಿದುಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ತಂದೆ ಕೆಳಗೆ ಬಿದ್ದು ಒದ್ದಾಡುತ್ತಿದ್ದರು. ಅದನ್ನು ಗಮನಿಸಿದ ಪುತ್ರ ತಂದೆಯನ್ನು ವೈಯರ್ನಿಂದ ಬಿಡಿಸಲು ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಈ ಘಟನೆಯಲ್ಲಿ ತಂದೆ ಪ್ರಭು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಪುತ್ರ ಮಂಜುನಾಥ ಆಸ್ಪತ್ರೆಗೆ ದಾಖಲಿಸಿದ ಕೆಲವು ನಿಮಿಷಗಳ ಬಳಿಕ ಮೃತರಾಗಿದ್ದಾರೆ. ಒಟ್ಟಿಗೆ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು: ''ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಂದೆ, ಮಗ ಸಾವನ್ನಪ್ಪಿದ್ದಾರೆ. ಅನೇಕ ಬಾರಿ ಮನವಿ ಮಾಡಿಕೊಂಡರೂ ವಿದ್ಯುತ್ ಕಂಬವನ್ನು ತೆರವುಗೊಳಿಸಿರಲಿಲ್ಲ. ಇದರಿಂದಲೇ ದುರಂತ ಸಂಭವಿಸಿದೆ'' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಮನೆಯವರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಇತ್ತೀಚಿನ ಪ್ರಕರಣ, ತುಮಕೂರು: ವಿದ್ಯುತ್ ಸ್ಪರ್ಶಿಸಿ ತಂದೆ, ಮಗಳು ಸಾವು( ತುಮಕೂರು): ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ತಂದೆ ಹಾಗೂ ಮಗಳು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಜುಲೈ 10 ರಂದು ಜರುಗಿತ್ತು. ಮೃತರನ್ನು ಬಸವನಹಳ್ಳಿಯ ರಾಮಕೃಷ್ಣ ರೆಡ್ಡಿ (65) ಮತ್ತು ಮಗಳು ನಿರ್ಮಲ (45) ಎಂದು ಗುರುತಿಸಲಾಗಿದೆ.
ರಾಮಕೃಷ್ಣ ರೆಡ್ಡಿ ಅವರು ಮಡಕಶಿರಾ ತಾಲೂಕಿನ ಎಲ್ಲೊಟಿಯಲ್ಲಿರುವ ತಮ್ಮ ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದರು. ಕೊಳವೆ ಬಾವಿಯ ಬಳಿ ವಿದ್ಯುತ್ ಸ್ಪರ್ಶಿಸಿ ಅವರು ಸಾವನ್ನಪ್ಪಿದ್ದಾರೆ. ತಂದೆ ಬರುವುದು ತಡವಾದ್ದರಿಂದ ಹೊಲಕ್ಕೆ ಹುಡುಕಿಕೊಂಡು ಬಂದ ಪುತ್ರಿಯೂ ಕೂಡ ತಂದೆಯನ್ನು ಮುಟ್ಟಿದ್ದಾಳೆ. ಇದರಿಂದ ಮಗಳು ಸ್ಥಳದಲ್ಲೇ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಸಚಿವರ ಮನೆಯಲ್ಲಿ ಗುಂಡಿನ ಸದ್ದು.. ಸೆಂಟ್ರಲ್ ಮಿನಿಸ್ಟರ್ ಪುತ್ರನ ಸ್ನೇಹಿತ ಸಾವು, ಮೂವರು ಪೊಲೀಸರ ವಶಕ್ಕೆ!