ಚಿಕ್ಕೋಡಿ: ಎರಡ್ಮೂರು ತಿಂಗಳಿನಿಂದ ಬೆಳೆಗಳಿಗೆ ಹಾಕಲು ಯೂರಿಯಾ ಸಿಗುತ್ತಿಲ್ಲ. ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಕೇಳಿದರೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಯಬಾಗ ತಾಲೂಕಿನ ವಿವಿಧ ಗ್ರಾಮದ ರೈತರು, ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಒಂದು ಯೂರಿಯಾ ಗೊಬ್ಬರ ಚೀಲಕ್ಕೆ 260 ರಿಂದ 270 ರವರೆಗೆ ದರವಿದೆ. ಆದರೆ ಗೊಬ್ಬರ ಅಂಗಡಿ ಮಾಲೀಕರು 300 ರಿಂದ 400 ರವರೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಎರಡು ಚೀಲ ಯೂರಿಯಾ ಗೊಬ್ಬರ ಬೇಕಾದರೆ ಕಡ್ಡಾಯವಾಗಿ ಯೂರಿಯಾ ಚೀಲದ ಜೊತೆಗೆ ಲಿಂಕ ಚೀಲಗಳನ್ನು ಖರೀದಿ ಮಾಡಬೇಕು. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ, ಏನೂ ಪ್ರಯೋಜನವಾಗಿಲ್ಲ ಎಂದು ರಾಯಬಾಗ ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಇದ್ದರೂ ನೀಡುತ್ತಿಲ್ಲ, ತಮಗೆ ಬೇಕಾದ ರೈತರಿಗೆ ಮಾತ್ರ ನೀಡುತ್ತಿದ್ದಾರೆ. ಹೀಗಾಗಿ ನಮ್ಮ ಬೆಳೆಗಳೆಲ್ಲವೂ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತಿವೆ. ಯೂರಿಯಾ ಅಂಗಡಿಯವರ ಜೊತೆ ಕೃಷಿ ಅಧಿಕಾರಿಗಳು ಶಾಮಿಲಾಗಿದ್ದಾರೆ. ಹೀಗಾಗಿ ಕೃಷಿ ಅಧಿಕಾರಿಗಳು ಗೊಬ್ಬರಗಳ ಅಂಗಡಿಗಳಿಗೆ ಭೇಟಿ ನೀಡುತ್ತಿಲ್ಲ. ರೈತರ ತೊಂದರೆಗಳಿಗೆ ಸ್ಪಂಧಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತರು ನೇರವಾಗಿ ಆರೋಪ ಮಾಡಿದ್ದಾರೆ.
ಈ ಯೂರಿಯಾ ತೊಂದರೆಯನ್ನು ಆದಷ್ಟು ಬೇಗನೆ ನಿವಾರಿಸದೆ ಹೋದಲ್ಲಿ, ಮುಂದಿನ ದಿನಗಳಲ್ಲಿ ರೈತರು ಉಗ್ರ ಹೋರಾಟ ಮಾಡಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.