ಅಥಣಿ: ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆ ಹಾನಿಗೊಳಗಾದ ಹಿನ್ನೆಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಸತತ ಎರಡು ತಿಂಗಳಿಂದ ಮೋಡ ಕವಿದ ವಾತಾವರಣದ ಹಾಗೂ ಅತಿಯಾದ ಮಳೆಯಿಂದಾಗಿ ತಾಲೂಕಿನ ನೂರಾರು ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ರೈತರು ಇಂದು ಸಭೆ ನಡೆಸಿದರು.
ತಾಲೂಕಿನ ಐಗಳಿ ಕ್ರಾಸ್ ಶ್ರೀ ಮಾಣಿಕಪ್ರಭು ದೇವಾಲಯದ ಬಳಿ ಸಾವಿರಾರು ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆಗಾರರು ಸಭೆ ಸೇರಿ, ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಳೆದ ವರ್ಷ ಅಕಾಲಿಕ ಮಳೆಗೆ ದ್ರಾಕ್ಷಿ ಫಸಲು ಹಾಳಾಗಿದ್ದು, ಸ್ವಲ್ಪ ಉಳಿದ ಒಣದ್ರಾಕ್ಷಿಗೆ ಸರಿಯಾದ ಬೆಲೆಯಿಲ್ಲದೆ, ಶೀತಗೃಹದಲ್ಲಿ ಮಾರಾಟವಾದೆ ಉಳಿದಿದೆ ಎಂದು ಅಳಲು ತೋಡಿಕೊಂಡರು.
ರೈತರ ಅಹವಾಲು ಆಲಿಸಿದ ಅಥಣಿ ತಾಲೂಕು ತೋಟಗಾರಿಕೆ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ವಿನೋದ್ ಚುರುಮುರಿ, ಈಗಾಗಲೇ ಸಮೀಕ್ಷೆ ಮಾಡಲು ಪ್ರಾರಂಭಿಸಲಾಗಿದೆ. ಹಾನಿಯ ಬಗ್ಗೆ ಸಂಪೂರ್ಣ ವಿವರವನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ್ಯಪ್ ಮೂಲಕ ದ್ರಾಕ್ಷಿ ಬೆಳೆ ಸರ್ವೇ ಮಾಡಿ ಆಪ್ಲೋಡ್ ಮಾಡಬೇಕೆಂದು ಮಾಹಿತಿ ನೀಡಿದರು.