ಚಿಕ್ಕೋಡಿ (ಬೆಳಗಾವಿ): ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ತಂದಿರುವುದು ಅನ್ನದಾತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ ಮೂಡಲಗಿ ಪಟ್ಟಣದ ಹೊರವಲಯದಲ್ಲಿರುವ ನಿಪ್ಪಾಣಿ -ಮುಧೋಳ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ಬಳಿಕ ಮಾತನಾಡಿದ ಶ್ರೀಶೈಲ ಅಂಗಡಿ, ರೈತ ದೇಶದ ಬೆನ್ನೆಲುಬು. ರೈತನನ್ನೇ ನಂಬಿಕೊಂಡು ಹಲವಾರು ವ್ಯವಹಾರಗಳು ರಾಜ್ಯದಾದ್ಯಂತ ನಡೆಯುತ್ತಿವೆ. ರಾಜ್ಯ ಸರ್ಕಾರ ಬಂಡವಾಳಶಾಹಿಗಳಿಗೆ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟು, ರೈತರಿಗೆ ತೊಂದರೆ ನೀಡುತ್ತಿದೆ.
ಈ ಕಾಯ್ದೆಯಿಂದ ಆಹಾರ ಉತ್ಪಾದನೆ ಇಳಿಮುಖವಾಗಿ, ಅನ್ನ-ನೀರಿಗೆ ರೈತರು ಕಷ್ಟಪಡುವಂತಾಗುತ್ತದೆ. ಹೀಗಾಗಿ ಕೂಡಲೇ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದರು.