ಚಿಕ್ಕೋಡಿ: ಕಳೆದೊಂದು ತಿಂಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸಲು ಟ್ರ್ಯಾಕ್ಟರ್ ಮಾಲೀಕರು ಹೆಚ್ಚಿಗೆ ಬಾಡಿಗೆ ಕೇಳುತ್ತಿದ್ದಾರೆ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾದಿಂದ ಈಗಾಗಲೇ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇದೀಗ ಕೆಲ ದಿನಗಳಿಂದ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಕೃಷಿ ಕೆಲಸಗಳನ್ನು ಮಾಡಲು ಟ್ರ್ಯಾಕ್ಟರ್ ಮಾಲೀಕರು ಬಾಡಿಕೆಯನ್ನು ಹೆಚ್ಚು ಕೇಳುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದು, ಇದೀಗ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಯಂತ್ರೋಪಕರಣದ ಬಾಡಿಗೆ ದರ ಏರಿಕೆ :
ಕೃಷಿ ಚಟುವಟಿಕೆಗಳಿಗೆ ಯಂತ್ರವನ್ನೇ ಅವಲಂಬಿಸಿರುವ ಸಣ್ಣ, ಮಧ್ಯಮ ಹಂತದ ರೈತರು ಒಟ್ಟಾರೆ ವೆಚ್ಚದಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಯಂತ್ರದ ಬಾಡಿಗೆಗೆ ಸುರಿಯುವಂತಾಗಿದೆ. ಡಿಸೇಲ್ ದರ ಏರಿಕೆಯಿಂದ ಬಾಡಿಗೆಗೆ ಟ್ರ್ಯಾಕ್ಟರ್ ನೀಡುವ ಮಾಲೀಕರು ಯಂತ್ರೋಪಕರಣದ ಬಾಡಿಗೆ ದರ ಎರಿಸಿದ್ದಾರೆ. ಈ ಮೊದಲು ಟ್ರ್ಯಾಕ್ಟರ್ ಚಾಲಿತ ನೇಗಿಲು, ರೂಟ್ ವೇಟರ್, ಪಲ್ಟಿ ವೇಟರ್ಗಳ ಬಾಡಿಗೆ ದರ ಗಂಟೆಗೆ 700- 800 ರೂ. ವರೆಗೆ ಇತ್ತು . ಈಗ ಗಂಟೆಗೆ 1,000 ರಿಂದ 1,200ರೂ. ಗೆ ಏರಿಕೆ ಮಾಡಿದ್ದಾರೆ. ಅಂದರೆ ಗಂಟೆಗೆ ಸರಾಸರಿ 300 ರಿಂದ 400 ರೂ. ವರೆಗೆ ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.