ಅಥಣಿ(ಬೆಳಗಾವಿ): ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೇಡಿಕೆ ಉಂಟಾಗಿ ಕೈ ತುಂಬಾ ಹಣ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಯುವ ರೈತನೊಬ್ಬ ತನ್ನ 8 ಎಕರೆ ಜಮೀನಿನಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕುಂಬಳ ಬೆಳೆದಿದ್ದು, ಸದ್ಯ ನಷ್ಟದ ಆತಂಕದಲ್ಲಿದ್ದಾನೆ. ಸರ್ಕಾರ ನೆರವಿಗೆ ಧಾವಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾನೆ.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಯುವ ರೈತ ಮಹಾಂತೇಶ್ ಚಿಪ್ಪಾಡಿ ಎಂಬುವರು ಸುಮಾರು 8-10 ಎಕರೆ ಜಮೀನಿನಲ್ಲಿ ಕುಂಬಳಕಾಯಿ ಬೆಳೆದಿದ್ದು, ಲಾಕ್ಡೌನ್ ಹಿನ್ನೆಲೆ ಸರಿಯಾದ ಮಾರುಕಟ್ಟೆ, ಬೆಲೆ ಸಿಗದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. ತಾವು ಕಷ್ಟಪಟ್ಟು ಬೆಳೆದ ಫಸಲು ಮಾರಾಟವಾಗದೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ವತಃ ತಾವೇ ಈಟಿವಿ ಭಾರತಕ್ಕೆ ವಿಡಿಯೋ ಕಳುಹಿಸಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ತಾಲೂಕು ಆಡಳಿತ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಅವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ. ಡಿಸಿಎಂ ಲಕ್ಷ್ಮಣ ಸವದಿಯವರೂ ರೈತರ ನೆರವಿಗೆ ಬರುತ್ತಿಲ್ಲ. ಇನ್ನು ಇಲ್ಲೇ ಪಕ್ಕದ ತಾಲೂಕಿನ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ರೈತರ ಬೆಳೆ ಸ್ವತಃ ತಾವೇ ಕೊಂಡುಕೊಂಡು ಇತರರಿಗೆ ಹಂಚಿ ಮಾದರಿಯಾಗಿದ್ದಾರೆ ಎನ್ನುತ್ತಾರೆ ನೊಂದ ರೈತ ಮಹಾಂತೇಶ್.
ಅಥಣಿ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿಯವರೇ ರೈತರ ಬೆಳೆಗಳಿಗೆ ಸರ್ಕಾರದಿಂದ ಯೋಗ್ಯ ದರ ದೊರಕುವಂತೆ ಮಾಡಿ. ಇಲ್ಲವಾದರೆ ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತ ಮಹಾಂತೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.