ಬೆಳಗಾವಿ: ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಅರೆಬೆತ್ತಲೆ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಶೋಕ ವೃತ್ತದಿಂದ ನಗರದ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ವೇಳೆ, ಧಾರಾಕಾರ ಮಳೆಯ ನಡುವೆಯೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ, ಮಾತನಾಡಿದ ರೈತ ಮುಖಂಡರು, ಸರ್ಕಾರ ಘೋಷಿಸಿರುವ ಎಫ್.ಆರ್.ಪಿ ದರವು ರೈತರಿಗೆ ಮೋಸದ ದರವಾಗಿದೆ. 27ಸಾವಿರ ಕೋಟಿ ರೂ.ಗಳಿಗೂ ಅಧಿಕ ಕಬ್ಬಿನ ಇತರ ಉತ್ಪನ್ನಗಳಿಂದ ತೆರಿಗೆ ಪಡೆಯುವ ಸರಕಾರ ಕಬ್ಬು ಬೆಳೆಯುವ ರೈತರಿಗೆ ಎಫ್.ಆರ್.ಪಿ ಬೆಲೆ ಎಂಬ ಮೋಸ ಮಾಡುತ್ತಿದೆ. ಕಬ್ಬಿನ ಇತರ ಉತ್ಪನ್ನಗಳಿಂದ ಪಡೆಯುವ ತೆರಿಗೆಯಲ್ಲಿ ಸರಕಾರ ರೈತರಿಗೆ ಪ್ರತಿ ಟನ್ ಗೆ 2,000 ರೂ. ನೀಡಬೇಕು. ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ಗೆ 3,500 ರೂ. ನೀಡಬೇಕು. ಒಟ್ಟಾರೆಯಾಗಿ ಪ್ರತಿ ಟನ್ ಗೆ 5,500 ರೂ. ಪ್ರತಿ ಟನ್ ಕಬ್ಬಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರತಿ ಟನ್ ಕಬ್ಬಿನ ಬೆಲೆ 5500 ರೂ. ನಿಗದಿಗೊಳಿಸುವಂತೆ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಎಸ್.ಪಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಭೆ ನಡೆಸಿದ್ದರು.
ಡಿಸಿ ನೇತೃತ್ವದಲ್ಲಿ ನಡೆದ ಸಭೆಯು ಸಂಪೂರ್ಣ ವಿಫಲವಾಗಿದೆ. ನಮ್ಮ ರೈತರ ಮನವಿಗೆ ಸ್ಪಂದಿಸಿಲ್ಲ. ಕಳೆದ ಹತ್ತು ವರ್ಷಗಳಿಂದ ಕಬ್ಬಿನ ಬೆಲೆಯೂ 2,500 ರೂ.ಗಳಷ್ಟೇ ಇದ್ದು, ಉಳಿದ ಎಲ್ಲ ಕಬ್ಬು ಬೆಳೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಕೇಂದ್ರ ಸರಕಾರ ಕೂಡಲೇ ಎಫ್ ಆರ್.ಪಿ ಬೆಲೆ ನಿಗದಿಗೊಳಿಸಬೇಕು. ಅಲ್ಲದೇ ರಾಜ್ಯದ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು ಈ ಕುರಿತು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್!