ಅಥಣಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 40ನೇ ರೈತ ಹುತಾತ್ಮ ದಿನವನ್ನು ತಾಲೂಕಿನ ಐಗಳಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು. ಹುತಾತ್ಮ ರೈತರ ಪೋಟೋಗೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದರು.
ಬಳಿಕ ಮಹಾದೇವ ಮಡಿವಾಳ ಮಾತನಾಡಿ, ರಾಜ್ಯದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸೂಕ್ತ ಬೆಲೆ ಸಿಗದೆ ಕೃಷಿಕರಿಗೆ ನಷ್ಟ ಸಂಭವಿಸಿದೆ. ಇದರಲ್ಲೂ ಈ ಮಹಾಮಾರಿ ಒಕ್ಕಲುತನಕ್ಕೆ ಭಾರೀ ಪ್ರಮಾಣದ ಹಾನಿ ಮಾಡಿದೆ. ಕೇಂದ್ರ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ಕುಲಕ್ಕೆ ಅತಿ ದೊಡ್ಡ ಮಾರಕವಾಗಿದೆ. ಇದರಿಂದ ರೈತರು ಜಮೀನು ರೈತರಿಗೆ ಹೋಗದೆ ಬಂಡವಾಳ ಹೂಡಿಕೆದಾರರ ಕೈ ಸೇರುವುದರಿಂದ ಮುಂದೆ ಕೃಷಿ ಚಟುವಟಿಕೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ರೈತರಿಗೆ ಮಾರಕವಾಗಿರುವ ಅಂಶಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.