ಚಿಕ್ಕೋಡಿ (ಬೆಳಗಾವಿ): ಪ್ರತಿಯೊಂದು ಕೆಲಸಕ್ಕೂ ರೈತರು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಬರುವ ಜನಸಾಮಾನ್ಯರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ರೈತರು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಂದು ನಡೆಯಿತು. ಸಬ್ ರಿಜಿಸ್ಟ್ರಾರ್ ಅವರು ಕಚೇರಿಗೆ ಬರುವ ರೈತರಿಂದ ಹೆಚ್ಚುವರಿ ಹಣ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೈತರು ಆಕ್ರೋಶ ಹೊರಹಾಕಿದರು.
ಪ್ರತಿ ನೋಂದಣಿಗೂ 15 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿದೆ. ಇದು ಯಾಕೆ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ಕೂಡಲೇ ಈ ಭ್ರಷ್ಟಾಚಾರ ವ್ಯವಸ್ಥೆಯವನ್ನು ಸರಿ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಇದೆ ವೇಳೆ ರೈತ ಮುಖಂಡ ಮಾಹದೇವ ಮಡಿವಾಳ ಮಾತನಾಡಿ, "ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಜಾಲವಿದೆ. ಕಚೇರಿಗೆ ಬರುವ ರೈತರು ಹಾಗೂ ಜನಸಾಮಾನ್ಯರ ಹತ್ತಿರ ಸರ್ಕಾರ ನಿಗದಿಪಡಿಸಿದ ದರವನ್ನು ಬಿಟ್ಟು ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ. 10 ಸಾವಿರ ಹಣವನ್ನು ಮೇಡಂಗೆ ಕೊಡಬೇಕು, 3 ಸಾವಿರ ದ್ವಿತೀಯ ದರ್ಜೆ ನೌಕರನಿಗೆ ಕೊಡಬೇಕು, ನಂತರ ದಸ್ತೂರಿ ಕಟ್ಟುವವರಿಗೆ (ದಸ್ತು ಬರಹಗಾರ) ನಾಲ್ಕು ಸಾವಿರ ರೂ ಕೊಡಬೇಕು. ಇದೆಲ್ಲವೂ ಸೇರಿ ಹೆಚ್ಚುವರಿಯಾಗಿ ಹದಿನೈದು ಸಾವಿರ ಹಣ ಕೊಟ್ಟರೆ ರೈತರ ಕೆಲಸ ಮಾಡಿ ಕೊಡುತ್ತಾರೆ" ಎಂದು ದೂರಿದರು.
"ನೇರವಾಗಿ ರೈತರು ತಮ್ಮ ಕೆಲಸವನ್ನು ಮಾಡುವುದಕ್ಕೆ ಹೋದರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಅಲ್ಲಿನ ಸ್ಥಳಿಯ ಅಧಿಕಾರಿಗಳು ಮೇಡಂ ಫೀಸ್ ಕೊಟ್ಟರೆ ಮಾತ್ರ ನಿಮ್ಮ ಕೆಲಸವನ್ನು ಮಾಡಿ ಕೊಡಲಾಗುವುದು ಎಂದು ಹೇಳುತ್ತಾರೆ. ಇದರಿಂದ ಹಲವು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದರಿಂದಾಗಿ ನಾವು ಅಧಿಕಾರಿಯನ್ನು ತರಾಟೆ ತೆಗೆದುಕೊಂಡು ಅವರಿಗೆ ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದೇವೆ. ಕಚೇರಿಯಲ್ಲಿ ಯಾವುದಕ್ಕೆ ಎಷ್ಟು ದರ ಎಂದು ಫಲಕ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಕಚೇರಿಯ ಎದುರು ಪ್ರತಿಭಟನೆ ಮಾಡುತ್ತೇವೆ" ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ:ಅಧಿಕಾರಿಗಳ ಕರ್ತವ್ಯ ಲೋಪ ಸಹಿಸಲ್ಲ, ಜನರ ಕೆಲಸಕ್ಕೆ ಲಂಚ ಕೇಳಿದ್ರೇ ಸುಮ್ಮನಿರಲ್ಲ: ಶಾಸಕ ಶಿವಗಂಗಾ ಬಸವರಾಜ್ ತಾಕೀತು
ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ: ಇತ್ತೀಚಿಗೆ ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಂದ ಇ- ಸ್ವತ್ತು ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಬೇಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಯಾನಂದ್ ಆರೋಪಿ ಅಧಿಕಾರಿಯಾಗಿದ್ದು, 5 ಸಾವಿರ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಮಂಜುನಾಥ್ ಎಂಬುವರ ಮನೆ, ಖಾಲಿ ನಿವೇಶನದ ಇ-ಸ್ವತ್ತು ಮಾಡಿಕೊಡಲು ದಯಾನಂದ್ 40,000 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.