ಬೆಳಗಾವಿ: ಕಷ್ಟಪಟ್ಟು ರೈತ ಬೆಳೆದ ಬೆಳೆಗಳು ಅರ್ಧದಷ್ಟು ನಾಶವಾಗಿ ಹೋಗುತ್ತಿದ್ದು, ಇದರಿಂದ ಸ್ಮಾರ್ಟ್ ತರಕಾರಿ ಮಾರುಕಟ್ಟೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕೆಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅಭಿಪ್ರಾಯಪಟ್ಟರು.
ಎಪಿಎಂಸಿ ಸಭಾಂಗಣದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭದ ಹಿನ್ನೆಲೆ ಭೇಟಿ ನೀಡಿ ಮಾತನಾಡಿದ ಸಚಿವರು, ಕೃಷಿ ಮಾರುಕಟ್ಟೆಯಲ್ಲಿ ರಾಜಕೀಯ ಮಾಡಲಾಗುತ್ತದೆ. ರಾಜಕೀಯ ಮಾಡುವುದಕ್ಕೆ ಬೇಡ ಎನ್ನುತ್ತಿಲ್ಲ. ಆದರೆ ಅಭಿವೃದ್ಧಿ ವಿಷಯದಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ. ನಿಮಗೆ ಬೆಳಗಾವಿಯಲ್ಲಿ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ಇದೆ ಎಂದು ಹೇಳಿದರು.
ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸಮರ್ಪಕ ಉಪಯೋಗ ಆಗಬೇಕು. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ವೈಜ್ಞಾನಿಕ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಆಡಳಿತ ವರ್ಗ ಕೆಲಸ ಮಾಡಬೇಕು ಎಂದರು.