ಬೆಳಗಾವಿ : ಸಾಮಾನ್ಯವಾಗಿ ರೈತರು ಕೃಷಿ ಸಂಶೋಧಕರಿಂದ ಸಂಶೋಧನೆಗೆ ಒಳಪಟ್ಟ ತಳಿಗಳನ್ನು (ಸಸಿ) ಹಾಗೂ ಬಿತ್ತನೆ ಬೀಜಗಳನ್ನು ನಾಟಿ ಮಾಡಿ ಬೆಳೆಯುವುದು ವಾಡಿಕೆ. ಆದರೆ, ಒಬ್ಬ ರೈತ ಸ್ವಾವಲಂಬಿಯಾಗಿ ತಾವು ಬೆಳೆದ ಬೆಳೆಯಲ್ಲಿ ತಾವೇ ಸಂಶೋಧನೆ ಮಾಡಿ ಉತ್ತಮ ತಳಿ ಆರಿಸಿ ಸ್ವಂತ ಪ್ರಯೋಗ ಮಾಡಿದ್ದಾನೆ. ಈ ಮೂಲಕ ವಿನೂತನವಾಗಿ ದ್ರಾಕ್ಷಿ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ಜತ್ತ ತಾಲೂಕಿನ ಬಸರಗಿ ಗ್ರಾಮದಲ್ಲಿ ಸಚಿನ್ ಶಿವಪ್ಪ ದೊಡ್ಡಮಾಳ ಎಂಬುವರು ವಿಎಸ್ಡಿ ತಳಿಯ ದ್ರಾಕ್ಷಿ ಬೆಳೆ ಬೆಳೆದು ಸದ್ಯ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸಾಮಾನ್ಯವಾಗಿ ನಾವೆಲ್ಲರೂ ಒಂದಿಂಚು ಹಾಗೂ ಗುಂಡನೆ ಗಾತ್ರದ ದ್ರಾಕ್ಷಿ ನೋಡುತ್ತೇವೆ. ಆದರೆ, ವಿಎಸ್ಡಿ ತಳಿ ಮೂರು ಇಂಚಿನ ಉದ್ದನೆ ಗಾತ್ರದ ದ್ರಾಕ್ಷಿ ಇದಾಗಿದೆ. ಮಹಾರಾಷ್ಟ್ರದ ಕವಟೇಮಹಾಕಾಳ ಗ್ರಾಮದಲ್ಲಿ ಒಬ್ಬ ರೈತ ಸೂಪರ್ ತಳಿಯ ದ್ರಾಕ್ಷಿ ಬೆಳೆಯಲ್ಲಿ ವಿಭಿನ್ನವಾಗಿ ಒಂದು ಗಿಡದಲ್ಲಿ ಫಸಲು ನೋಡಿ, ಆ ಗಿಡಕ್ಕೆ ವರ್ಷದಿಂದ ವರ್ಷಕ್ಕೆ ಹಲವು ಪ್ರಯೋಗ ಮಾಡಿ ವಿಎಸ್ ಡಿ ಎಂಬ ನಾಮಕರಣ ಮಾಡಲಾಗಿದೆ.
ಸಚ್ಚಿನ ದೊಡ್ಡಮಾಳ ಎಂಬುವರು ಹೆಚ್ಚಿಗೆ ಸಂಶೋಧನೆ ಮಾಡಿ ಮೂರು ನಾಲ್ಕು ಇಂಚಿನ ದ್ರಾಕ್ಷಿ ಬೆಳೆಯನ್ನು ಬೆಳೆದು ಉಭಯ ರಾಜ್ಯಗಳ ರೈತರ ಗಮನ ಸೆಳೆದಿದ್ದಾರೆ. ಸದ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರು ಸಚಿನ್ ಅವರ ತೋಟಕ್ಕೆ ಬಂದು ದ್ರಾಕ್ಷಿ ಬೆಳೆ ನೋಡಿಕೊಂಡು ಹೋಗುತ್ತಿದ್ದಾರೆ. ಎಲ್ಲ ದ್ರಾಕ್ಷಿಗಳಿಗಿಂತಲೂ ಈ ವಿಎಸ್ಡಿ ತಳಿ ಹೆಚ್ಚಿನ ಇಳುವರಿ ನೀಡುತ್ತಿದ್ದು, ಇದರಿಂದ ರೈತರಿಗೆ ವರದಾನವಾಗಿದೆ. ಒಂದು ಎಕರೆಯಲ್ಲಿ 20 ಟನ್ ನಷ್ಟು ಫಸಲು ಬರುತ್ತಿದ್ದು, ಪ್ರತಿ ಕೆಜಿಗೆ 60 ರಿಂದ 80 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಅತಿ ವಿರಳವಾಗಿ ಇರುವ ಈ ತಳಿಯ ಹಣ್ಣಿಗೆ ವಿದೇಶಗಳಿಂದ ಬಾರಿ ಬೇಡಿಕೆ ಬಂದಾಗಿದೆ. ದುಬೈ, ಅಮೆರಿಕ, ಆಸ್ಟ್ರೇಲಿಯಾ ಇನ್ನಿತರ ದೇಶಗಳಿಗೆ ಬಾಂಬೆ ಮಾರ್ಗವಾಗಿ ಈ ದ್ರಾಕ್ಷಿ ಹಣ್ಣು ರಫ್ತಾಗುತ್ತದೆ. ಉದ್ದನೇ ದ್ರಾಕ್ಷಿ ಇರುವುದರಿಂದ ನೋಡಕ್ಕೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ತಿನ್ನುವುದಕ್ಕೆ ಮೃದುವಾಗಿರುವುದರಿಂದ ಈ ದ್ರಾಕ್ಷಿಗೆ ಬಾರಿ ಡಿಮ್ಯಾಂಡ್ ಕೂಡಾ ಬಂದಿದೆ.
ರೈತ ಸಚಿನ್ ಶಿವಪ್ಪ ದೊಡ್ಡಮಾಳ ಈಟಿವಿ ಭಾರತ ಜೊತೆ ಮಾತನಾಡಿ, ನಾವು ಕೂಡ ಈ ಭಾಗದಲ್ಲಿ ಪಾರಂಪರಿಕವಾಗಿ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದೇವೆ. ನಾವು ಕೂಡ 70 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಆದರೆ, ಪಕ್ಕದ ಗ್ರಾಮದ ಕವಟೇಮಹಾಕಾಳ ಗ್ರಾಮದಲ್ಲಿ ಒಬ್ಬ ರೈತ ವಿಎಸ್ಡಿ ತಳಿಯ ದ್ರಾಕ್ಷಿ ಬೆಳೆದು ಇಳುವರಿಯ ಪ್ರಯೋಗ ಮಾಡಿದ್ದರು. ಈ ತಳಿ ಭರ್ಜರಿಯಾಗಿ ಇಳುವರಿ ಕೂಡಾ ನೀಡಿತ್ತು. ನಾವು ಅಲ್ಲಿಂದ ತಂದು ಎರಡು ಎಕರೆ ಪ್ರದೇಶದಲ್ಲಿ ಬೆಳೆದೆವು, ಉತ್ತಮ ಇಳುವರಿ ಬರುವುದರಿಂದ ಮತ್ತಷ್ಟು ಬೆಳೆಯನ್ನು ಅಭಿವೃದ್ಧಿಪಡಿಸಿ 10 ಎಕರೆ ಪ್ರದೇಶದಲ್ಲಿ ವಿಸ್ತರಣೆ ಮಾಡಿ ಲಾಭ ಪಡೆಯುತ್ತಿದ್ದೇವೆ. ಈ ತಳಿಗೆ ಖರ್ಚು ಕೂಡ ಕಡಿಮೆ. ರೋಗ ಬಾಧೆ ಕೂಡ ಅಷ್ಟೊಂದು ಇಲ್ಲದಿರುವುದು ರೈತರಿಗೆ ವರದಾನವಾಗಿದೆ.
ನಾವು ಒಂಬತ್ತು ಜನ ಅಣ್ಣ ತಮ್ಮಂದಿರು ಇರುವುದರಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ. 18 ಕಿಲೋಮೀಟರ್ ಅಂತರದಿಂದ ನೀರನ್ನು ತಂದು ನಾವು ಕೃಷಿ ಚಟುವಟಿಕೆ ಮಾಡಿ ಈ ರೀತಿ ಆದಾಯವನ್ನು ಪಡೆಯುತ್ತಿದ್ದೇವೆ. ಈ ತಳಿಗೆ ವಿದೇಶಗಳಿಂದ ಉತ್ತಮ ಬೇಡಿಕೆ ಇದ್ದು ಮಧ್ಯವರ್ತಿಗಳು ನಮ್ಮ ಹತ್ತಿರ ದ್ರಾಕ್ಷಿ ಸರಬರಾಜಿಗೆ ಸಾಲುಗಟ್ಟಿ ನಿಲ್ಲುತ್ತಾರೆ. ಈ ದ್ರಾಕ್ಷಿ ಬೆಳೆ ನೋಡಿದರೆ ನಮಗೆ ಒಂದು ರೀತಿ ಸಂತೋಷವಾಗುತ್ತದೆ.
ಕಳೆದ ವರ್ಷ ನಾಲ್ಕು ಇಂಚು ದ್ರಾಕ್ಷಿ ಉದ್ದವಾಗಿತ್ತು. ಆದರೆ, ಈ ವರ್ಷ ಹವಾಮಾನ ವೈಪರೀತ್ಯದಿಂದಾಗಿ 3 ಇಂಚು ದ್ರಾಕ್ಷಿ ಉದ್ದನೆಯಾಗಿ ಬೆಳೆದಿದೆ. ಪ್ರತಿ ಎಕರೆಗೆ 20 ಟನ್ ಇಳುವರಿ ಬರುವುದರಿಂದ ನಮಗೆ ಉತ್ತಮ ಆದಾಯದ ಜೊತೆಗೆ ಸಂತೋಷವನ್ನು ತಂದು ಕೊಟ್ಟಿದೆ ಎಂದು ತಿಳಿಸಿದರು.
ಇತರ ರೈತರಿಗೆ ಬೇಕಾದರೆ ನಾವು ಈ ಸಿಸಿ ಕೊಡುತ್ತೇವೆ. ಯಾರಿಗಾದರೂ ಈ ಬೆಳೆಯ ಬಗ್ಗೆ ಮಾಹಿತಿ ಬೇಕಾದರೆ ಈ ನಂಬರ್ 9307646705 ಕ್ಕೆ ಸಂಪರ್ಕ ಮಾಡಿ ಎಂದು ಸಚಿನ್ ಶಿವಪ್ಪ ದೊಡ್ಡಮಾಳ ಹೇಳಿದರು.
ಇದನ್ನೂ ಓದಿ : ಬಿಡುಗಡೆಯಾಗದ ಬರ ಪರಿಹಾರದ ಹಣ: ರಾಜಭವನದ ಕದ ತಟ್ಟಿದ ಬಿಜೆಪಿ