ಬೆಳಗಾವಿ: ಜನತಾದಳ ಪಕ್ಷ ಕಟ್ಟಿದ್ದು ನಾನು ಹಾಗೂ ದೇವೇಗೌಡರು. ಅಲ್ಲಿ ಬಂದು ಶಾಸಕರಾಗಿದ್ದು ಕುಮಾರಸ್ವಾಮಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ನಾನು ನಂಬಿದ ಗಿಳಿ ಹದ್ದಾಗಿ ಕುಕ್ಕಿತು ಎಂದು ನಾನು ಹೇಳಿಲ್ಲ. ಆ ಮಾತನ್ನು ರಮೇಶ್ ಕುಮಾರ್ ಹೇಳಿದ್ದಾರೆ. ನಾವು ಇಲ್ಲಿಯವರೆಗೆ ಪಕ್ಷ ಕಟ್ಟಿ ಬೆಳೆದಿದ್ದು, ಕುಮಾರಸ್ವಾಮಿ ಪಕ್ಷ ಕಟ್ಟಲಿ ನೋಡೋಣ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ ನಾನಲ್ಲ. ಬಹಿರಂಗವಾಗಿ ಬಿಜೆಪಿಗೆ ಸಹಕಾರ ಮಾಡಿದ್ದು ಅವರ ಪಕ್ಷದವರು. ನಮ್ಮ ಪಕ್ಷಕ್ಕೆ ಅವರ ಸಲಹೆ ಬೇಕಾಗಿಲ್ಲ. ಬರುವ ಉಪಚುನಾವಣೆಯಲ್ಲಿ ನಾವು 15 ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದರು.