ಅಥಣಿ(ಬೆಳಗಾವಿ): ಸಾಮಾಜಿಕ ಜಾಲತಾಣಗಳಲ್ಲಿ ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಎಂಬ ಸುದ್ದಿ ಮತ್ತು ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿ ಅಥಣಿ ಜನತೆಯನ್ನು ಬೆಚ್ಚಿಬೀಳಿಸಿತ್ತು.
ಹೌದು, ಖಾಸಗಿ ವಾಹಿನಿಯೊಂದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಲಾಕ್ ಡೌನ್ ನಿಂದ ಅಥಣಿಯಲ್ಲಿ ಊಟವಿಲ್ಲದೆ ಕುಟುಂಬದ ಮೂರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಜೊತೆಗೆ ವಿಡಿಯೋ ಪೋಸ್ಟ್ ಮಾಡಿತ್ತು. ವಿಡಿಯೋವನ್ನು ಮೇಲ್ನೋಟಕ್ಕೆ ಗಮನಿಸಿದಾಗ, ಒಬ್ಬಳು ಗೃಹಿಣಿ ಎರಡು ಜನ ಮಕ್ಕಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇರುವ ದೃಶ್ಯ ಕಂಡುಬರುತ್ತಿದ್ದು, ಮನಕಲುಕುವಂತಿತ್ತು.
ಈ ಸಂಬಂಧ ದೂರವಾಣಿ ಮೂಲಕ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಅವರನ್ನು ವಿಚಾರಿಸಿದಾಗ ಅಥಣಿಯಲ್ಲಿ ಈ ರೀತಿ ಯಾವುದೇ ಘಟನೆ ಸಂಭವಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮೇಲಾಧಿಕಾರಿಗಳು ಕೂಡ ಕರೆ ಮಾಡಿ ವಿಚಾರ ಮಾಡಿದ್ದಾರೆ. ಇದುವರೆಗೆ ನಿರ್ದಿಷ್ಟವಾಗಿ ಎಲ್ಲಿಯ ಘಟನೆ ಎಂಬುದು ಕಂಡು ಬಂದಿಲ್ಲ. ನಾವು ಪರಿಶೀಲನೆ ಮಾಡುತ್ತೆವೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ಅಷ್ಟೇ ಅಲ್ಲದೆ, ಈ ಬಗ್ಗೆ ಐಗಳಿ ಠಾಣೆಯ ಪಿಎಸ್ಐ ಕೆ. ಎಸ್. ಕೋಚರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ ಇದುವರೆಗೆ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.