ಚಿಕ್ಕೋಡಿ : ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದ್ದಂತೆ ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಹಾಗೂ ಸಚಿವೆ ಜೊಲ್ಲೆ ನಡುವೆ ರಾಜಕೀಯ ಗುದ್ದಾಟ ಆರಂಭವಾಗಿದೆ.
ಕೆ.ಎಲ್. ಗ್ರಾಮದಲ್ಲಿ ಜಾತಿ ಪ್ರಮಾಣಪತ್ರ ವಿವಾದ:
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಮದಾಪೂರ ಕೆ.ಎಲ್. ಗ್ರಾಮದ ವಾರ್ಡ್ ನಂಬರ್ 3ರ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಉತ್ತಮ ಪಾಟೀಲ್ ಬೆಂಬಲಿಗ ಅಭ್ಯರ್ಥಿ ಒಬ್ಬರಿಗೆ ಜಾತಿ ಪ್ರಮಾಣಪತ್ರ ನೀಡಿದ ನಿಪ್ಪಾಣಿ ತಹಶೀಲ್ದಾರ್, ನಂತರ ಜಾತಿ ಪ್ರಮಾಣಪತ್ರ ಮಾನ್ಯವಲ್ಲ ಎಂದು ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ನಾಮಪತ್ರ ಪರಿಶೀಲನೆ ಮುಂದೂಡಿದ್ದಾರೆ.
ಇದನ್ನೂ ಓದಿ : ಗದಗ: ಗ್ರಾಪಂ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಆತ್ಮಹತ್ಯೆಗೆ ಶರಣು
ಹೀಗಾಗಿ ರಮೇಶ್ ಜಾರಕಿಹೊಳಿ ಆಪ್ತ ಉತ್ತಮ ಪಾಟೀಲ್ ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದ್ದು, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದರ ಒತ್ತಡದಿಂದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಚಿವೆ ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉತ್ತಮ ಪಾಟೀಲ್, ಜೊಲ್ಲೆ ಕುಟುಂಬದ ದಬ್ಬಾಳಿಕೆ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಇದರಿಂದ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಒಂದು ಕಡೆ ಸಚಿವೆ ಜೊಲ್ಲೆ ಬೆಂಬಲಿಗರು ಜೈಕಾರ ಕೂಗಿದರೆ, ಇನ್ನೊಂದೆಡೆ ಉತ್ತಮ ಪಾಟೀಲ್ ಬೆಂಬಲಿಗರು ಜೊಲ್ಲೆ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.