ಬೆಳಗಾವಿ: ರಾಜ್ಯ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವುದರ ಜೊತೆಗೆ ಅವರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಬರುವ ಮುಂಚೆ ನೇಕಾರಿಕೆ ಮಾಡುವ ಕುಟುಂಬಗಳು ಬಹಳ ಕಷ್ಟಕ್ಕೆ ಒಳಗಾಗಿದ್ದವು. ಜಿಎಸ್ಟಿ, ನೋಟ್ ಬ್ಯಾನ್ಗೆ ಹೊಂದಿಕೊಳ್ಳುವ ಸಂದರ್ಭದಲ್ಲೇ ಕೊರೊನಾ ಮಹಾ ಆಘಾತ ನೀಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೀಡಾದ ನೇಕಾರರು ಆತ್ಮಹತ್ಯೆ ದಾರಿ ತುಳಿಯುತ್ತಿರುವುದು ದುಃಖಕರ ಸಂಗತಿ ಎಂದರು.
ನೇಕಾರರಿಗೆ ಸಾಲದ ಹೊರೆ ಒಂದೆಡೆಯಾದರೆ, ಕೊರೊನಾದಿಂದ ಈಗ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಹಾಗಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಈ ಕ್ಷಣದಲ್ಲಿ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಪರಿಹಾರ ನೀಡದೇ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಈ ಸರ್ಕಾರಕ್ಕೆ ಹೇಳೋರಿಲ್ಲ, ಕೇಳೋರಿಲ್ಲ. ದಿಕ್ಕು ದಿಸೆ ಇಲ್ಲದಂತೆ ಯಡಿಯೂರಪ್ಪ ಸರ್ಕಾರ ವರ್ತಿಸುತ್ತಿದೆ ಎಂದರು.
ಬರಗಾಲದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ತಕ್ಷಣ ಪರಿಹಾರ ನೀಡುವ ಮೂಲಕ ಬ್ಯಾಂಕ್ಗೆ ಸಾಲ ವಸೂಲಿ ಮಾಡದಂತೆ ನಿರ್ದೇಶನ ನೀಡಲಾಗಿತ್ತು. ಆದ್ರೆ ಈ ಸರ್ಕಾರ ಇದ್ಯಾವುದನ್ನೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಇನ್ನಾದರೂ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಮೂಲಕ ಬ್ಯಾಂಕ್ಗಳಿಗೆ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ನೇಕಾರರಿಗೆ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು. ಮಾಲೀಕರಿಗೆ ಬಂಡಾವಾಳ ಒದಗಿಸಬೇಕು. ವಿದ್ಯುತ್ ಬಿಲ್ ತೆರಿಗೆ ಕಡಿಮೆ ಮಾಡಬೇಕು. ನೇಕಾರರ ಸಮಸ್ಯೆ ಕುರಿತು ಸರ್ಕಾರ ಅಧ್ಯಯನ ನಡೆಸಿ ಚರ್ಚೆ ನಡೆಸಬೇಕು ಎಂದರು.