ಚಿಕ್ಕೋಡಿ(ಬೆಳಗಾವಿ): ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿ, ಧರ್ಮಗುರುಗಳೂ ಸೇರಿ ಎಲ್ಲರ ವಿನಂತಿ ಒಂದೇ. ಅದು ಎಲ್ಲರೂ ಮನೆಯಲ್ಲೇ ಇರಿ ಅನ್ನೋದು. ಹಾಗಾಗಿ ಅನಾವಶ್ಯಕವಾಗಿ ಹೊರಗಡೆ ಬರಬೇಡಿ ಎಂದು ನಿಡಸೋಶಿ ದುರದುಂಡೇಶ್ವರ ಮಠದ 10ನೇ ಪೀಠಾಧಿಪತಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಶಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭೂಮಿ, ಹಣ, ಬಂಗಾರ ಮನೆ ಇವೆಲ್ಲ ಕಳೆದುಕೊಂಡರೆ ಮತ್ತೆ ಸಿಗಬಹುದು. ಆದರೆ, ಜೀವ ಕಳೆದುಕೊಂಡರೆ ಮತ್ತೆ ಬಾರದು ಎಂದು ಶ್ರೀಗಳು ಎಚ್ಚರಿಸಿದರು.
ಭೂಮಂಡಲದಲ್ಲಿ ಮನುಕುಲದ ಜೀವ ಉಳಿಯಬೇಕಾದರೆ ಕಟ್ಟು ನಿಟ್ಟಾಗಿ ಸರ್ಕಾರದ ಪಾಲನೆ ಮಾಡಬೇಕಿದೆ. ನಮ್ಮ ನಿಮ್ಮೆಲ್ಲರ ಜೀವ ಉಳಿಯಲು ತಮ್ಮ ಜೀವ ಒತ್ತೆ ಇಟ್ಟು ವೈದ್ಯರು, ಪೊಲೀಸರು, ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ತೊಂದರೆಯಾಗದಂತೆ ಸಹಕಾರ ನೀಡೋಣ ಎಂದು ಹೇಳಿದರು.