ಬೆಳಗಾವಿ : ಸದಾ ಒಂದಿಲ್ಲೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ 'ಮಾನವ ಬಂಧುತ್ವ ವೇದಿಕೆ' ( ಎಂಬಿವಿ) ಈ ಬಾರಿ ಯುವ ಜನತೆಯನ್ನು ಸೆಳೆಯಲು ಹೆಲಿಕಾಪ್ಟರ್ ರೈಡಿಂಗ್ ಅವಕಾಶ ನೀಡಿ ರಾಜ್ಯದ ಗಮನ ಸೆಳೆಯಿತು.
ಗೋಕಾಕ್ ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಎಂಬಿವಿ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ಹೆಲಿ ಕಾಪ್ಟರ್‌ನಲ್ಲಿ ಗೋಕಾಕ್ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಯುವ ಮೂಲಕ ವಿಜೇತ ಯುವಕ-ಯುವತಿಯರಿಗೆ ಹೊಸ ಅನುಭವ ನೀಡಿದರು. ಸ್ಪರ್ಧಾ ವಿಜೇತ ಯುವಕ-ಯುವತಿಯರು ಹೆಲಿಕಾಪ್ಟರ್‌ನಲ್ಲಿ ಜಾಲಿಯಾಗಿ ಹಾರಾಡಿದರು.
ಹೆಲಿಕಾಪ್ಟರ್ ನೋಡಲು ಜನ ಜಂಗುಳಿ ಇತ್ತು. ವಾಲ್ಮೀಕಿ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ಯುವ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದರು. ಮೊದಲ ಬಾರಿ ಹೆಲಿಕಾಪ್ಟರ್ ಕಂಡ ಮಕ್ಕಳು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಕುಣಿದು ಕುಪ್ಪಳಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರ ಹೆಸರು : ಬೆಳಗಾವಿಯ ವೈಷ್ಣವಿ ಕಡೋಲ್ಕರ್, ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಭಾಗವಾನ್, ಚಾಮರಾಜನಗರದ ಮಾನಸಾ ವಿ ಪ್ರಶಸ್ತಿ ಪಡೆದು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿದರು.
ಭಾಷಣ ಸ್ಪರ್ಧೆ ವಿಜೇತರು : ತೀರ್ಥಹಳ್ಳಿಯ ಪೂಜಾ ತೀರ್ಥಹಳ್ಳಿ, ಘಟಪ್ರಭಾದ ಮುಷ್ರಫ್ ಸಯ್ಯದ್, ಕಲಬುರ್ಗಿಯ ಪ್ರಿಯಾಂಕಾ ಭರಣಿ, ಮೆಳವಂಕಿಯ ಪವಿತ್ರಾ ಹತ್ತರವಾಟ, ಧಾರವಾಡದ ಶ್ವೇತಾ ಜುಗಳೆ, ಕಲಖಾಂಬದ ಶಾಮಲಾ ಭರಮಾ ಹಿರೋಜಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಹೆಚ್.ಡಿ.ಕುಮಾರಸ್ವಾಮಿ!