ಬೆಳಗಾವಿ: ಕಳೆದ ಡಿಸಿಸಿ ಬ್ಯಾಂಕ್ ಗದ್ದುಗೆಗೆ ಕೊನೆ ಕ್ಷಣದಲ್ಲಿ ನಡೆದ ಹೈಡ್ರಾಮಾದಿಂದ ಒಂದೇ ಪಕ್ಷದಲ್ಲಿದ್ದರೂ ಇಬ್ಭಾಗ ಆಗಿದ್ದ ಹಾಲಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕತ್ತಿ ಮತ್ತು ಜಾರಕಿಹೊಳಿ ಸಹೋದರರು ಇಂದು ಅದೇ ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ಒಂದಾಗಿದ್ದಾರೆ..!
ಹೌದು, ಅಕ್ಕಪಕ್ಕ ಕುಳಿತು ಮಾಧ್ಯಮಗೋಷ್ಟಿ ನಡೆಸುವ ಮೂಲಕ ನಾವೆಲ್ಲರೂ ಒಂದಾಗಿದ್ದೇವೆ. ಮುಂದಿನ 20 ವರ್ಷವೂ ಕೂಡಿಯೇ ಇರುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಪಕ್ಷ ನೋಡದೇ ಪ್ರತಿಷ್ಠೆಗಾಗಿ ಗದ್ದುಗೆಗೆ ಗುದ್ದಾಟ ನಡೆಸುತ್ತಿದ್ದ ಬೆಳಗಾವಿ ಸಾಹುಕಾರ ಎಂದೇ ಬಿಂಬಿತವಾಗಿರುವ ಸಚಿವ ರಮೇಶ್ ಜಾರಕಿಹೊಳಿಗೆ ಮುಗುದಾರ ಹಾಕುವಲ್ಲಿ ಕಮಲ ನಾಯಕರು ಹಾಗೂ ಆರ್‍ಎಸ್‍ಎಸ್ ನಾಯಕರು ಯಶಸ್ವಿಯಾಗಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ರಾಜ್ಯದ ಅತಿ ಶ್ರೀಮಂತ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿತ್ತು. 16 ಸ್ಥಾನಗಳು ನಿರ್ದೇಶಕರು ಇರುವ ಈ ಚುನಾವಣೆಯಲ್ಲಿ ಈಗಾಗಲೇ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ ಸ್ಥಾನಗಳು ಅವಿರೋಧ ಆಯ್ಕೆಗೆ ಪ್ರಯತ್ನಗಳು ನಡೆದಿವೆ. ನಾಡಿದ್ದು, ನಾಮಪತ್ರ ಹಿಂಪಡೆಯುವ ದಿನವಾಗಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ ಎಂದು ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದ ಮೂಲಕವೇ ಸವದಿ ಹಾಗೂ ಕತ್ತಿ ಕುಟುಂಬ ರಾಜಕೀಯ ಪ್ರವೇಶಿಸಿದ್ದರು. ಕಳೆದ ಹಲವು ವರ್ಷಗಳಿಂದ ಕತ್ತಿ ಹಾಗೂ ಸವದಿ ಬಣಗಳ ನಡುವೆಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ಗದ್ದುಗೆಗೆ ಗುದ್ದಾಟ ನಡೆಯುತ್ತಿತ್ತು. ಜಾರಕಿಹೊಳಿ ಸಹೋದರರ ಬೆಂಬಲದಿಂದ ಕತ್ತಿ ಸಹೋದರರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೈಕಮಾಂಡ್ ಹಾಗೂ ಆರ್‍ಎಸ್‍ಎಸ್ ನಾಯಕರ ಬೆಂಬಲ ಹೊಂದಿರುವ ಲಕ್ಷ್ಮಣ ಸವದಿ ಈ ಸಲ ಡಿಸಿಸಿ ಬ್ಯಾಂಕ್ ಗದ್ದುಗೆಗೆ ಏರಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದರು. ಆದರೆ, ಸವದಿ ಓಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ನಿಮ್ಮ ಬಣ ರಾಜಕೀಯ ಪಕ್ಷದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ ಎಂದು ಆರ್‍ಎಸ್‍ಎಸ್ ನಾಯಕ ಅರವಿಂದರಾವ್ ದೇಶಪಾಂಡೆ ಸೂಚನೆ ನೀಡಿದ್ದರು. ಇದರಿಂದ ಹಾವು ಮುಂಗುಸಿಯಂತಿದ್ದ ಸವದಿ ಬಣ ಹಾಗೂ ಕತ್ತಿ ಬಣ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಬ್ಯಾಂಕ್ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆ ಮಾಡದೇ ಅವಿರೋಧ ಆಯ್ಕೆ ಮಾಡುತ್ತಿದ್ದೇವೆ ಎಂದು ಘೊಷಿಸಿದರು.
ರಮೇಶ್ ಕತ್ತಿಯೇ ಮುಂದಿನ ಅಧ್ಯಕ್ಷ?
ಜಿಲ್ಲಾ ಕಮಲ ನಾಯಕರ ಗೌಪ್ಯ ಸಭೆ ಬಳಿಕ ಹೊರಬಂದ ಡಿಸಿಎಂ ಲಕ್ಷ್ಮಣ ಸವದಿ ಮಾಧ್ಯಮಗಳ ಜತೆಗೆ ಮಾತನಾಡಿ, ವರಿಷ್ಠರ ಸೂಚನೆಯಂತೆ ಡಿಸಿಸಿ ಬ್ಯಾಂಕಿಗೆ ಅವಿರೋಧ ಆಯ್ಕೆ ಮಾಡುತ್ತಿದ್ದೇವೆ. ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯೂ ಇದೇ ಮಾದರಿಯಲ್ಲಿ ನಡೆಯಲಿವೆ ಎಂದಿದ್ದರು.
ಇವರ ಹೇಳಿಕೆ ನೋಡಿದ್ರೆ ಬಿಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ರಮೇಶ್ ಕತ್ತಿ ಅವರೇ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಕಳೆದ ಲೋಕಸಭೆ ಚುಣಾವಣೆಯಲ್ಲಿ ರಮೇಶ್ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಪಕ್ಷದ ನಿರ್ಧಾರಕ್ಕೆ ಬೇಸರಗೊಂಡಿದ್ದ ಕತ್ತಿ ಸಹೋದರರನ್ನು ಸ್ವತಃ ಯಡಿಯೂರಪ್ಪನವರೇ ಬೆಳಗಾವಿಗೆ ಬಂದು ಸಮಾಧಾನ ಪಡಿಸಿದ್ದರು. ರಾಜ್ಯಸಭೆಗೆ ನೇಮಕ ಮಾಡುವ ಭರವಸೆಯನ್ನೂ ನೀಡಿದ್ದರು. ರಾಜ್ಯಸಭೆಗೆ ಪೈಪೋಟಿ ನಡೆಸಿದ್ದ ರಮೇಶ ಕತ್ತಿಗೆ ಬಿಜೆಪಿ ಅವಕಾಶ ನೀಡದೇ ಈರಣ್ಣ ಕಡಾಡಿಗೆ ಅವಕಾಶ ನೀಡಿತ್ತು. ಸ್ಥಾನಮಾನ ಇಲ್ಲದೇ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ಅತ್ಯುತ್ತಮವಾಗಿ ಮುಂದುವರೆಸುತ್ತಿರುವ ರಮೇಶ್ ಕತ್ತಿ ಅವರೇ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲಿದ್ದಾರೆ.
ಬಿಜೆಪಿ ಎಚ್ಚರಿಕೆ ಹೆಜ್ಜೆ!
ಕಳೆದ ವರ್ಷ ನಡೆದ ಬೆಳಗಾವಿ ಪಿಎಲ್‍ಡಿ ಬ್ಯಾಂಕಿನ ಗದ್ದುಗೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಗುದ್ದಾಟ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಒಂದೇ ಪಕ್ಷದಲ್ಲಿದ್ದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಧ್ಯೆ ಸಂಧಾನ ನಡೆಸುವಲ್ಲಿ ಕೈ ನಾಯಕರು ಮುಂದೆ ಬರಲಿಲ್ಲ. ಪರಿಣಾಮ ಈ ಚುನಾವಣೆಯಲ್ಲಿ ಮುಜುಗರಕ್ಕೆ ಒಳಗಾದ ರಮೇಶ್ ಜಾರಕಿಹೊಳಿ ಅವರೇ ಮೈತ್ರಿ ಸರ್ಕಾರ ಪತನಕ್ಕೂ ಕಾರಣರಾದರು. ಈ ಸಲದ ಡಿಸಿಸಿ ಬ್ಯಾಂಕ್ ಚುನಾವಣೆ ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಗದ್ದುಗೆಗಾಗಿ ಸವದಿ ಹಾಗೂ ಕತ್ತಿ ಬಣಗಳ ಮಧ್ಯೆ ಪೈಪೋಟಿ ತೀವ್ರಗೊಳ್ಳುತ್ತಿತ್ತು. ಇದಕ್ಕೆ ಆರಂಭದಲ್ಲೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಕಮಲ ನಾಯಕರು ಮುಗುದಾರ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಆರ್‍ಎಸ್‍ಎಸ್ ನಾಯಕ ಅರವಿಂದರಾವ್ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿ ಅವಿರೋಧ ಆಯ್ಕೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ವರಿಷ್ಠರ ಸೂಚನೆಗೆ ಬಗ್ಗಿರುವ ಜಿಲ್ಲೆಯ ಕಮಲ ನಾಯಕರು ಭಿನ್ನಾಭಿಪ್ರಾಯ, ಪ್ರತಿಷ್ಠೆ ಬಿಟ್ಟು ಒಂದಾಗಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಉಮೇಶ ಕತ್ತಿ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಪರಿಷತ್ ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಒಟ್ಟಿಗೆ ಮಾಧ್ಯಮಗೋಷ್ಟಿ ನಡೆಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.