ಬೆಳಗಾವಿ: ಕಳೆದ ದಿನ ಅಂತರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ. ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಟ್ಟು 94 ಜನರು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ನಿವಾಸಿ ವರ್ಷದ ಶಿವಪ್ಪ (70) ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ಕಲುಷಿತ ನೀರು ಸೇವಿಸಿ 94 ಜನರು ಅಸ್ವಸ್ಥತಗೊಂಡಿದ್ದು, ನಾಲ್ವರು ಸ್ಥಿತಿ ಚಿಂತಾಜನಕವಾಗಿದೆ.
ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಪೈಪ್ ಒಡೆದು ಕುಡಿವ ನೀರಿಗೆ ಕಲಷಿತ ನೀರು ಮಿಕ್ಸ್ ಆಗುತ್ತಿತ್ತು. ಈ ನೀರನ್ನು ಸೇವಿಸಿ ಬಸವಣ್ಣ ದೇವರ ಗುಡಿ ಓಣಿ, ಲಕ್ಕಮ್ಮದೇವಿ ಗುಡಿ ಓಣಿ, ಬೀರದೇವರ ಗುಡಿ ಓಣಿಯ 94 ಜನರು ಅಸ್ವಸ್ಥಗೊಂಡು ರಾಮದುರ್ಗ ತಾಲೂಕು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ವಸ್ಥಗೊಂಡವರಲ್ಲಿ 44 ಪುರುಷರು, 30 ಮಹಿಳೆಯರು, 12 ಬಾಲಕರು, 8 ಬಾಲಕಿಯರು ಸೇರಿದ್ದಾರೆ. ಅಸ್ವಸ್ಥರಿಗೆ ಬಟಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮದುರ್ಗ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಂತಿ ಭೇದಿ ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ.
ಸುದ್ದಿ ತಿಳಿದಾಕ್ಷಣ ನಿನ್ನೆ ಮುದೇನೂರು ಗ್ರಾಮಕ್ಕೆ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಸ್ವಸ್ಥಗೊಂಡ ಜನರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಓದಿ: ಕಲುಷಿತ ನೀರು ಸೇವನೆ: ಬೆಳಗಾವಿಯಲ್ಲಿ ಐವತ್ತಕ್ಕೂ ಅಧಿಕ ಜನ ಅಸ್ವಸ್ಥ