ಬೆಳಗಾವಿ: ಇಂಚಲ ಗ್ರಾಮದಲ್ಲಿ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಶಿಕ್ಷಣ ಕ್ರಾಂತಿಯನ್ನೇ ಹರಿಸಿದ್ದು, ಆ ಗ್ರಾಮವೀಗ ರಾಜ್ಯದಲ್ಲಿ ಶಿಕ್ಷಕರ ತವರೂರು ಎಂದೇ ಖ್ಯಾತಿ ಪಡೆದಿದೆ.
ಬದುಕನ್ನು ಬೆಳಗಲು ವಿದ್ಯೆ ಬೇಕು ಎಂಬುವುದನ್ನು ಅರಿತುಕೊಂಡವರು, ಇಂಚಲ ಮಠದ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು. ಇವರ ಶಿಕ್ಷಣ ಪ್ರೇಮದಿಂದ ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲ ಗ್ರಾಮದಲ್ಲೀಗ, ಪ್ರತಿ ಮನೆಗೊಬ್ಬರಂತೆ ಶಿಕ್ಷಕ ಶಿಕ್ಷಕಿಯರಿದ್ದಾರೆ. ಒಂದೇ ಮನೆಯಲ್ಲಿ ಹತ್ತಾರು ಶಿಕ್ಷಕರಿರುವ ಹಲವು ಕುಟುಂಬಗಳೂ ಈ ಗ್ರಾಮದಲ್ಲಿವೆ.
ಸುಮಾರು 15 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಇಂಚಲ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಶಿಕ್ಷಕರಿದ್ದು, ಕಲೆ, ಸಾಹಿತ್ಯ, ಆಧ್ಯಾತ್ಮ ಮತ್ತು ಸಂಸ್ಕೃತಿಗೆ ಜೊತೆಗೆ ದೇಶ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಇದಲ್ಲದೇ ಶ್ರೀಗಳ ಇಂಚಲ ಮಠದ ಶಿಕ್ಷಣ ತರಬೇತಿ ಸಂಸ್ಥೆಯಿಂದ ಸುಮಾರು 15 ರಿಂದ 20 ಸಾವಿರಕ್ಕೂ ಹೆಚ್ಚಿನ ಶಿಕ್ಷಕರನ್ನು ನೀಡಿದ ಕೀರ್ತಿ ಗ್ರಾಮಕ್ಕಿದ್ದು, ಡಿಇಡಿ ಮತ್ತು ಬಿಇಡಿ ಕೋರ್ಸ್ ತೇರ್ಗಡೆಯಾಗಿರುವ ನೂರಾರು ವಿದ್ಯಾರ್ಥಿಗಳು ಶಿಕ್ಷಕರಾಗುವ ಮೂಲಕ ನಾಡಿಗೆ ತಮ್ಮ ಸೇವೆ ಸಲ್ಲಿಸಲು ಅಣಿಯಾಗುತ್ತಿದ್ದಾರೆ.
ಸದ್ಯ ಶೈಕ್ಷಣಿಕವಾಗಿ ಮುಂದುವರೆದಿರೋ ಇಂಚಲ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಹಂತದವರೆಗಿನ ಶಿಕ್ಷಣ ಲಭ್ಯವಿದೆ. ಶಾಲೆ ಮತ್ತು ಕೌಟುಂಬಿಕ ಹಂತದಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇದೇ ಕಾರಣಕ್ಕೆ ಗ್ರಾಮದಲ್ಲಿನ ಯುವಕರು ದೇಶಸೇವೆ ಸೇರಿದಂತೆ ಸರ್ಕಾರಿ ಸೇವೆಯಲ್ಲಿ ಮುಂದಿದ್ದಾರೆ.
1974-75 ಸಂದರ್ಭದಲ್ಲಿ ಕುಗ್ರಾಮವಾಗಿದ್ದ ಇಂಚಲವನ್ನು ಸುಶಿಕ್ಷಿತ ಗ್ರಾಮವನ್ನು ಮಾಡಲು ಪಣತೊಟ್ಟ ಶಿವಾನಂದ ಭಾರತಿ ಸ್ವಾಮೀಜಿ, ಬಡ ಮಕ್ಕಳಿಗೆ ಕೈಗೆಟುಕುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕೆಂದು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಕ್ರಿಯಾಶೀಲರಾಗಿ ಇಂದಿಗೂ ದುಡಿಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದಾರೆ. ಇನ್ನು ಸ್ವಾಮೀಜಿಗಳ ಕಳಕಳಿ ಆಶೀರ್ವಾದದಿಂದಲೇ ಇಂಚಲ ಗ್ರಾಮದಲ್ಲಿ ಸಾಕಷ್ಟು ಜನರು ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ತಾಲೂಕಿನ ಬಡ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಕಾರಣಕ್ಕೆ ಇಂಚಲ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಪರಿಣಾಮ ಕೆಲವೇ ವರ್ಷಗಳಲ್ಲಿ ಇಂಚಲ ಗ್ರಾಮದಲ್ಲೀಗ ಸಾಕಷ್ಟು ಜನರು ಶಿಕ್ಷರು ಸೇರಿದಂತೆ ಸರ್ಕಾರಿ ಸೇವೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಿಕ್ಷಣದ ಪ್ರಮಾಣ ಹೆಚ್ಚುತ್ತಲ್ಲಿದ್ದು, ಯಾವುದೇ ಫಲಾಪೇಕ್ಷೆಯೂ ಇಲ್ಲದೇ ಜನರ ಒಳತಿಗಾಗಿ ದುಡಿಯುವ ಶಿವಾನಂದ ಸ್ವಾಮೀಜಿಗಳ ಸೃಜನಶೀಲತೆಯಿಂದಲೇ ಇಂಚಲದಲ್ಲಿ ನೂರಾರು ಶಿಕ್ಷರು ನಿರ್ಮಾಣವಾಗಿದ್ದಾರೆ ಎಂಬ ಮಾತಿದೆ.
ಇಂಚಲದಲ್ಲಿ ಗ್ರಾಮ ಶಿಕ್ಷಕರನ್ನು ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. 300ಕ್ಕೂ ಹೆಚ್ಚು ಸೈನಿಕರು ದೇಶಪ್ರೇಮಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 70ಕ್ಕೂ ಹೆಚ್ಚು ಸೈನಿಕರು ನಿವೃತ್ತರಾಗಿ ಗ್ರಾಮಕ್ಕೆ ಮರಳಿದ್ದಾರೆ. ಇದಲ್ಲದೇ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿಯೂ ಸೇವೆ ಸಲ್ಲಿಸುತ್ತಿರೊದು ಹೆಮ್ಮೆಯ ವಿಷಯವಾಗಿದೆ.