ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಮೊದಲ ಪಟ್ಟಿಯಲ್ಲೇ ಬೆಳಗಾವಿ ಜಿಲ್ಲೆ ಸ್ಥಾನ ಪಡೆದಿದ್ದರಿಂದ ಕುಂದಾನಗರಿ ಜನ ಸಂಭ್ರಮಿಸಿದ್ದರು. ಆದರೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಉಪಯೋಗ ಆಗಿಲ್ಲವೆಂದು ಜನ ಆರೋಪಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಅಂದಾಕ್ಷಣ ಬೆಳಗಾವಿ ಜನ ನಮ್ಮ ಕುಂದಾನಗರಿ ಸ್ಮಾರ್ಟ್ ಸಿಟಿ ಆಗುತ್ತದೆ, ನಮಗೆಲ್ಲಾ ಒಳ್ಳೆಯ ಸೌಲಭ್ಯಗಳು ಸಿಗುತ್ತವೆ ಅಂದುಕೊಂಡಿದ್ದರು. ಆದರೆ ತಮ್ಮ ನಂಬಿಕೆಗಳು ಮಾತ್ರ ಹುಸಿಯಾಗಿವೆ. ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಎರಡು ಇ-ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ ಅನ್ನುತ್ತಿದ್ದಾರೆ ಇಲ್ಲಿನ ಜನರು.
ಇವುಗಳನ್ನು ಕಟ್ಟಿ ಎರಡು ವರ್ಷವಾದ್ರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಇ-ಶೌಚಾಲಯಗಳು ಇದ್ದು ಇಲ್ಲದಂತಾಗಿವೆ. ಇನ್ನು ಇಲ್ಲಿಯೇ ಪಕ್ಕದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಎರಡು ವರ್ಷ ಮೇಲಾಯ್ತು. ಇತ್ತ ಯಾವೊಬ್ಬ ಅಧಿಕಾರಿಯೂ ಲಕ್ಷ್ಯ ವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಆಟೋ ಚಾಲಕ ಮಹಮ್ಮದ್ ನಿಯಾಜ್ ಶೇಖ್, ಇವುಗಳನ್ನು ರಿಪೇರಿ ಮಾಡಿ ಆರಂಭಿಸಬೇಕು. ಇಲ್ಲವಾದರೆ ತೆರವುಗೊಳಿಸಬೇಕು. ಇ-ಟಾಯ್ಲೆಟ್ಗಳು ಚಾಲು ಇಲ್ಲ, ನೀರು ಕೂಡ ಇಲ್ಲ. ಆದರೂ ಒಂದಿಷ್ಟು ಜನ ರಾತ್ರಿ ಹೊತ್ತು ಬಂದು ಹಾಗೇ ಉಪಯೋಗಿಸಿ ಹೋಗುತ್ತಿದ್ದಾರೆ. ಇದರಿಂದ ಸುತ್ತಲೂ ದುರ್ವಾಸನೆ ಬೀರುತ್ತಿದೆ. ಪಕ್ಕದಲ್ಲೇ ಬಸ್ ಸ್ಟಾಪ್ ಇದ್ದು ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಇನ್ನೋರ್ವ ಆಟೋ ಚಾಲಕ ಜಾಬೀರ್ ಮುಲ್ಲಾ ಮಾತನಾಡಿ, ಇ-ಟಾಯ್ಲೆಟ್ಗಳನ್ನು ಕಟ್ಟಿದ ದಿನದಿಂದಲೂ ಹಾಗೇ ಇವೆ. ಸುತ್ತಲೂ ಕಿಡಿಗೇಡಿಗಳು ಸಾರಾಯಿ ಕುಡಿದು ಬಾಟಲಿಗಳನ್ನು ಬಿಸಾಕಿ ಹೋಗಿದ್ದಾರೆ. ಇಲ್ಲಿ ಯಾವುದೇ ರೀತಿ ಸ್ವಚ್ಛತೆ ಕೂಡ ಇಲ್ಲ. ಹಾಗಾಗಿ ನಮ್ಮ ರಿಕ್ಷಾಗಳಿಗೆ ಪ್ರಯಾಣಿಕರು ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಏನೂ ಉಪಯೋಗ ಆಗಿಲ್ಲ. ಬೆಳಗಾವಿ ಮೊದಲು ಹೇಗಿತ್ತೊ, ಹಾಗೇ ಇದೆ ಎಂದು ಅಸಮಾಧಾನ ಹೊರ ಹಾಕಿದರು.
60 ಲಕ್ಷ ರೂ. ವೆಚ್ಚದಲ್ಲಿ 4 ಇ-ಟಾಯ್ಲೆಟ್: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಧರ್ಮವೀರ ಸಂಭಾಜಿ ವೃತ್ತ ಹಾಗೂ ರೈಲ್ವೆ ಗೇಟ್-2ರಲ್ಲಿ ಪುರುಷ ಮತ್ತು ಮಹಿಳೆಯರಿಗೆ ಎರಡು ಪ್ರತ್ಯೇಕ ಇ-ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಾಲ್ಕು ಇ-ಶೌಚಾಲಯಗಳಿಗೆ 60 ಲಕ್ಷ ರೂ. ಅನುದಾನ ಬಳಸಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿ ಕಟ್ಟಿದರೂ ಇವು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ನಿರ್ವಹಣೆ ಕೊರತೆ, ಅಸಮರ್ಪಕ ನೀರು ಪೂರೈಕೆಯಿಂದಾಗಿ ಹಾಳಾಗುತ್ತಿದ್ದು, ಸುತ್ತಲೂ ದುರ್ನಾತ ಹೆಚ್ಚಾಗಿ, ಜನ ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿಯಿದೆ.
1.20 ಕೋಟಿ ವೆಚ್ಚದಲ್ಲಿ ಆರ್.ಒ. ಪ್ಲಾಂಟ್ಸ್ ನಿರ್ಮಾಣ: ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 8-10 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ 12 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ಒಟ್ಟು 1.20 ಕೋಟಿ ವೆಚ್ಚ ವ್ಯಯಿಸಲಾಗಿದೆ.
ಕಳೆದ ಎರಡೂವರೆ ವರ್ಷದಿಂದ ನಿರ್ವಹಣೆ ಇಲ್ಲದೇ ಈ ಎಲ್ಲಾ ಘಟಕಗಳು ಸ್ಥಗಿತಗೊಂಡು, ಜನ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆರ್.ಒ. ಪ್ಲಾಂಟ್ಗಳ ಮೇಲೆ 24×7 ನೀರು ಎಂದು ಬರೆಯಲಾಗಿದೆ. ಆದರೆ ನೀರು ಮಾತ್ರ ಬಾರದಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಸ್ಥಾಯಿ ಸಮಿತಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಆರ್.ಒ ಪ್ಲಾಂಟ್, ಇ-ಟಾಯ್ಲೆಟ್ಗಳ ಪರಿಸ್ಥಿತಿ ಅವಲೋಕಿಸಿ, ಶೀಘ್ರವೇ ಇವು ಜನರ ಉಪಯೋಗಕ್ಕೆ ಬರುವಂತೆ ಕ್ರಮ ಕೈಗೊಳ್ಳುತ್ತೇವೆ - ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ
ಒಟ್ಟಾರೆ ಪಾಲಿಕೆ ಆಯುಕ್ತರು ಈ ಅವ್ಯವಸ್ಥೆ ಸರಿಪಡಿಸಿ, ಪೂರ್ಣಗೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕಾಯಕಲ್ಪ ನೀಡುವ ಭರವಸೆ ಕೊಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೈಗೊಂಡಿರುವ ಕಾಮಗಾರಿಗಳು ಆದಷ್ಟು ಬೇಗ ಜನರ ಸೇವೆಗೆ ಮುಕ್ತವಾಗಲಿ ಎಂಬುದೇ ಈಟಿವಿ ಭಾರತ ಕಳಕಳಿ.
ಇದನ್ನೂ ಓದಿ: ಬೆಳಗಾವಿ: ಸಿಎಂ ಆಗಮನ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ರಸ್ತೆ ದುರಸ್ತಿ- ಜನಸಾಮಾನ್ಯರ ಆಕ್ರೋಶ