ಬೆಳಗಾವಿ: ನಗರದ ವಂಟಮೂರಿ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಪ್ರಾರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ ಒಟ್ಟು ಮೂರು ಕೇಂದ್ರದಲ್ಲಿ 75 ಜನರ ಮೇಲೆ ಲಸಿಕೆಯ ಡೆಮೊ ನಡೆಸಲಾಗುತ್ತಿದೆ.
ಜಿಲ್ಲೆಯ 3 ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ವ್ಯವಸ್ಥೆಗೆ ಒಟ್ಟು ಮೂರು ಕೋವಿಡ್-19 ಮಾದರಿ ಲಸಿಕಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಬೆಳಗಾವಿಯ ವಂಟಮುರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಮಾದರಿ ಲಸಿಕಾ ಕೇಂದ್ರಗಳಲ್ಲಿ ಕೊರೊನಾ ಲಸಿಕೆಯ ಡೆಮೊ ನಡೆಸಲಾಗುತ್ತಿದೆ.
ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಿದ 75 ಜನರಿಗೆ ಡ್ರೈ ರನ್ಗೆ ಅವಕಾಶ ಮಾಡಿಕೊಡಲಾಗಿದ್ದು, ಅವರಿಗೆ ಕೋವಿಡ್ ಲಸಿಕಾ ಕೇಂದ್ರದಲ್ಲಿ ಒಂದು ಸೆಷನ್‌ಗೆ ಐವರು ಸಿಬ್ಬಂದಿ ನಿಯೋಜಿಸಲಾಗಿದೆ. ಮೊದಲು ಲಸಿಕೆ ಪಡೆಯುವವರನ್ನು ವೇಟಿಂಗ್ ರೂಮ್‌ನಲ್ಲಿ ಕೂರಿಸಲಾಗುತ್ತದೆ. ಬಳಿಕ ಕೋವಿನ್ ಪೋರ್ಟಲ್ ಆ್ಯಪ್‌ನಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದ ಬಳಿಕ ಲಸಿಕೆ ನೀಡುವ ಬಗ್ಗೆ ರಿಹರ್ಸಲ್ ಮಾಡಲಾಗುತ್ತದೆ. ಲಸಿಕೆ ನೀಡಿದ ಬಳಿಕ ಲಸಿಕೆ ಪಡೆದ ಬಗ್ಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಲಸಿಕೆ ಪಡೆದವರ ಮೇಲೆ ಅಬ್ಸರ್ವೇಷನ್ ರೂಂನಲ್ಲಿ 30 ನಿಮಿಷಗಳ ಕಾಲ ನಿಗಾ ಇಡಲಾಗುತ್ತದೆ. ಲಸಿಕೆ ಪಡೆದವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ರೆ ಎಐಎಫ್ಐ ವಿಭಾಗಕ್ಕೆ ರವಾನೆ ಮಾಡಲಾಗುತ್ತದೆ.
ಎಐಎಫ್ಐ - ಅಡ್ವರ್ಸ್ ಇವೆಂಟ್ ಫಾಲೋವಿಂಗ್ ಇಮ್ಯುನೈಸೇಷನ್ ಘಟಕದಲ್ಲಿ ಓರ್ವ ಅರವಳಿಕೆ ತಜ್ಞರು, ಇಬ್ಬರು ಸ್ಟಾಫ್ ನರ್ಸ್, ಓರ್ವ ಆ್ಯಂಬುಲೆನ್ಸ್ ಚಾಲಕನನ್ನು ನಿಯೋಜಿಸಲಾಗಿದೆ. ಒಂದು ಗಂಟೆಯಲ್ಲಿ ಕೇವಲ 10 ಜನರಿಗೆ ಮಾತ್ರ ವ್ಯಾಕ್ಸಿನೇಷನ್ ಡ್ರೈ ರನ್ ನೀಡಲಾಗುತ್ತಿದೆ. ಇಂದು ಓರ್ವ ಆಶಾ ಕಾರ್ಯಕರ್ತೆಗೆ ಮೊದಲು ಡೆಮೊ ಕೊರೊನಾ ಲಸಿಕೆ ಡ್ರೈ ರನ್ ನೀಡಲಾಯಿತು.
ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!
ಇನ್ನು ಕೊರೊನಾ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಮುಂಬಾಗಿಲಿನಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಳ್ಳಲು ದಾಖಲೆ ಪುಸ್ತಕವನ್ನು ಇರಿಸಲಾಗಿದೆ.