ಬೈಲಹೊಂಗಲ: ಕೊರೊನಾ ಭೀತಿ ಒಂದೆಡೆಯಾದರೆ, ಇತ್ತ ಈ ಗ್ರಾಮಗಳಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಜನರು ಪರದಾಡುತ್ತಿದ್ದಾರೆ.
ಕುಡಿಯುವ ನೀರು ಬಂದರು, ಅದು ಕಲುಷಿತವಾಗಿದ್ದು ಚರಂಡಿ ನೀರು ಅದರಲ್ಲಿ ಮಿಶ್ರಿತವಾಗಿ ಬರುತ್ತಿದೆ. ಇದರಿಂದ ಈ ಗ್ರಾಮದಲ್ಲಿ ಅನಾರೋಗ್ಯ ಸಮಸ್ಯೆ ಎದುರಾಗಿದ್ದು, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಎರಡು-ಮೂರು ಕಡೆಗಳಲ್ಲಿ ಒಡೆದು ಹೋಗಿದೆ. ಹೀಗಾಗಿ ಚರಂಡಿ ನೀರು ಕುಡಿಯುವ ನೀರಿನನಲ್ಲಿ ಮಿಶ್ರಣವಾಗುತ್ತಿದೆ. ಈ ನೀರನ್ನು ಸೇವಿಸುತ್ತಿರುವ ನಿವಾಸಿಗಳಿಗೆ ನೆಗಡಿ, ಕೆಮ್ಮು, ಜ್ವರ, ಬರುತ್ತಿವೆ ಎಂದು ನಿವಾಸಿಗಳು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೊರಗೆ ಬಂದು ಪ್ರತಿಭಟಿಸೋಣ ಎಂದರೆ ಲಾಕ್‌ಡೌನ್ ಇರುವ ಕಾರಣ ಹೊರ ಬರಲು ಆಗುತ್ತಿಲ್ಲ. ಅನಿವಾರ್ಯವಾಗಿ ಅದೆ ನೀರನ್ನು ಕುಡಿಯುವ ದುಸ್ಥಿತಿ ನಮ್ಮದಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಕುಡಿಯುವ ನೀರು ಸರಬರಾಜಿಗೆ ಪ್ಲಾಸ್ಟಿಕ್ ಪೈಪ್‌ಲೈನ್ ಅಳವಡಿಸಲಾಗಿದ್ದು, ಭೂಮಿಯ ಒಳಗೆ ಅಳವಡಿಸಬೇಕಾದ ಪೈಪ್‌ನ್ನು ರಸ್ತೆಯ ಬದಿಗಿರುವ ಮೋರಿಯಲ್ಲಿ ಅಳವಡಿಸಿದ್ದರಿಂದ, ಪೈಪ್ಗಳು ಒಡೆದು ಹೋಗಿವೆ. ಕುಡಿವ ನೀರಿನ ಪೈಪ್ ಮೋರಿಯಲ್ಲಿ ಹಾದುಹೋಗಿರುವ ಪರಿಣಾಮ ಚರಂಡಿಯಲ್ಲಿ ಹರಿಯುವ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಳ್ಳುತ್ತಿದೆ.