ಬೆಳಗಾವಿ: ಬೈಲಹೊಂಗಲ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಟಿಕೆಟ್ ನೀಡಿ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಟಿಕೆಟ್ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರಿಗೆ ಘೋಷಣೆ ಆಗುತ್ತಿದ್ದಂತೆ, ನಿರೀಕ್ಷೆಯಲ್ಲಿದ್ದ ಡಾ.ವಿಶ್ವನಾಥ ಪಾಟೀಲರ ಅಭಿಮಾನಿಗಳು ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಇಂದು ಬೆಳಗ್ಗೆ ಬೈಲಹೊಂಗಲ ಪಟ್ಟಣದ ಪಾಟೀಲರ ಕಚೇರಿ ಮುಂದೆ ಜಮಾಯಿಸಿದ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧಾರ ಕೈಗೊಂಡರು.
ಡಾ. ವಿಶ್ವನಾಥ ಪಾಟೀಲ ಪ್ರತಿಕ್ರಿಯಿಸಿ, ಟಿಕೆಟ್ ಹೇಗೆ ತಪ್ಪಿತು, ಯಾಕೆ ತಪ್ಪಿತು ಎಂಬುದೇ ಗೊತ್ತಾಗುತ್ತಿಲ್ಲ. ಟಿಕೆಟ್ ತಪ್ಪಲು ಒಂದು ಅಂಶವೂ ಇರಲಿಲ್ಲ. ಸಾಕಷ್ಟು ಕೆಲಸ ಮಾಡಿದ್ದೆವು, ಕಾರ್ಯಕರ್ತರ ದಂಡೇ ಇತ್ತು. ಅತ್ಯಂತ ಮುತುವರ್ಜಿವಹಿಸಿ ಪಕ್ಷ ಕಟ್ಟಿದವರು ನಮ್ಮ ಜೊತೆ ಇದ್ದರು. ಮುಖ್ಯಮಂತ್ರಿಗಳು ಕೂಡ ಸರ್ವೇಯಲ್ಲಿ ನಿಮ್ಮ ಹೆಸರಿದೆ, ನನ್ನ ಲಿಸ್ಟ್‌ನಲ್ಲಿಯೂ ನಿಮ್ಮದೇ ಹೆಸರಿದೆ ಎಂದು ಹೇಳಿದ್ದರು. ಯಡಿಯೂರಪ್ಪ ಮತ್ತು ಪ್ರಹ್ಲಾದ್ ಜೋಶಿ ಕೂಡಾ ಇದನ್ನೇ ಹೇಳಿದ್ದರು. ನನಗೆ ಟಿಕೆಟ್ ಕೈ ತಪ್ಪುವ ಸಂಶಯವೇ ಇರಲಿಲ್ಲ. ಅಲ್ಲದೇ ನಾ ಮಾಡಿದ್ದ ಕೆಲಸದ ಮೇಲೆ ನನಗೆ ವಿಶ್ವಾಸವಿತ್ತು ಆದರೂ ಪಕ್ಷ ನನಗೆ ಮೋಸ ಮಾಡಿತು ಎಂದರು.
ನಾನು ಕೆಜೆಪಿಯಿಂದ ಶಾಸಕನಾಗಿ ಆಯ್ಕೆಯಾದ ಒಂದು ವರ್ಷದ ನಂತರ ಬಿಜೆಪಿ ಸೇರಿದ್ದೆ. ಆಗ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ, ನನ್ನನ್ನು ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಮಾಡಿದ್ದರು. ಅಂದಿನಿಂದ 9 ವರ್ಷಗಳ ಕಾಲ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೆ. ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರಿಂದ ಮತ್ತು ಅತಿಯಾದ ವಿಶ್ವಾಸದಿಂದ ಕಳೆದ ಚುನಾವಣೆಯಲ್ಲಿ ನಾನು ಸೋಲಬೇಕಾಯಿತು.
ಈ ಹಿಂದಿನ ಸೋಲನ್ನು ಮರೆಯುವಂತೆ ಈ ಬಾರಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಎಲ್ಲ ದೊಡ್ಡ ನಾಯಕರು ಮನೆಯಲ್ಲಿ ಮಲಗಿದ್ದರು. ಆದರೆ ನಮ್ಮ ಕಾರ್ಯಕರ್ತರ ಜೊತೆಗೂಡಿ ಬಡ ಜನರಿಗೆ ನೆರವು ನೀಡುವ ಕೆಲಸ ಮಾಡಿದ್ದೆವು. ಮೊನ್ನೆ ಪದಾಧಿಕಾರಿಗಳ ಮತದಾನ ವೇಳೆಯೂ 109 ಮತಗಳಲ್ಲಿ ನನಗೆ 98 ಮತಗಳು ಬಿದ್ದಿದ್ದವು. ಆದರೆ ಈಗ ಟಿಕೆಟ್ ಪಡೆದಿರುವ ಮೆಟಗುಡ್ಡ ಅವರಿಗೆ ಕೇವಲ 11 ವೋಟ್ ಬಿದ್ದಿದ್ದವು. ಇಷ್ಟೆಲ್ಲ ಆದ ಮೇಲೂ ನಮಗೆ ಟಿಕೆಟ್ ಕೈ ತಪ್ಪಿದೆ, ಇದರಿಂದ ನಮಗೆ ಮೋಸವಾಗಿದೆ ಎಂದು ನಮ್ಮ ಕಾರ್ಯಕರ್ತರು ಅಸಮಾಧಾನಗೊಂಡು, ಇಂದು ಸಭೆ ಸೇರಿದ್ದಾರೆ ಎಂದರು.
ನಾನು ಇವತ್ತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಹಳ್ಳಿಗಳಲ್ಲೂ ನಮ್ಮ ಕಾರ್ಯಕರ್ತರಿದ್ದು, ಪ್ರತಿ ಹಳ್ಳಿಗಳಿಗೆ ತೆರಳಿ, ಅಭಿಪ್ರಾಯ ಸಂಗ್ರಹಿಸುತ್ತೇನೆ. ಕಾರ್ಯಕರ್ತರು ಚುನಾವಣೆಗೆ ನಿಲ್ಲುವಂತೆ ಹೇಳಿದರೆ ನಿಲ್ಲುತ್ತೇನೆ, ಬೇಡ ಎಂದರೆ ನಿಲ್ಲುವುದಿಲ್ಲ. ಕಾರ್ಯಕರ್ತರ ನಿರ್ಧಾರವೇ ನನ್ನ ನಿರ್ಧಾರ ಎಂದು ಡಾ. ವಿಶ್ವನಾಥ ಪಾಟೀಲ ಹೇಳಿದರು.
ಈವರೆಗೆ ಯಾರೂ ನನ್ನ ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕ ಮಾಡಿದರೂ ನನ್ನ ಬಳಿ ಉತ್ತರವಿಲ್ಲ. ಕಾರ್ಯಕರ್ತರು ಏನು ಹೇಳುತ್ತಾರೋ ಅದನ್ನೇ ನಾನು ಮಾಡಬೇಕಾಗುತ್ತದೆ. ಯಾಕೆಂದರೆ ಪಕ್ಷದವರು ನನಗೆ ಮೋಸ ಮಾಡಿದ್ದಾರೆ. ಹೀಗಾಗಿ ಅವರ ಮಾತನ್ನು ನಾನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಾ. ವಿಶ್ವನಾಥ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ 100ಕ್ಕೂ ಹೆಚ್ಚು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದು, ನಿಷ್ಠೆಯಿಂದ ಬೈಲಹೊಂಗಲ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದ ನಮ್ಮ ನಾಯಕರಿಗೆ ವರಿಷ್ಠರು ಮೋಸ ಮಾಡಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಶಿವಮೊಗ್ಗ: ಪುತ್ರಿ ಬಿಜೆಪಿ ಸೇರ್ಪಡೆಗೆ ಕಾಗೋಡು ತಿಮ್ಮಪ್ಪ ಅಸಮಾಧಾನ